Thursday, June 12, 2014

ಓ ಹಾಡು ನಿನ್ನಿಂದ ಈ ಪಾಡು...!

                                                   published 15th may 2014 in sakhi magzine

   
    ಅವು ಚುನಾವಣಾ ದಿನಗಳು, ಅಬ್ಬರದ ಸಮಾವೇಶಗಳು, ಒಬ್ಬರು ಇನ್ನೊಬ್ಬರಿಗೆ ಬಯ್ಯುವುದು, ಹೀಯಾಳಿಸುವುದು, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಜನರನ್ನು ಫುಸಲಾಯಿಸಲು ನಾನಾ ರೂಪ ಧರಿಸುವ ರಾಜಕಾರಣಿಗಳು. ಎಲ್ಲಿ ಹೋದರೂ ಚುನಾನಣೆಯ ಮಾತುಗಳೇ ಕೇಳುತ್ತಾ ತಲೆ ಚಿಟ್ಟು  ಹಿಡಿದಿತ್ತು ಇದರಿಂದ ತಪ್ಪಿಸಿಕೊಳ್ಳಲೆಂದು ಊರಿಗೆ ಹೋಗಿದ್ದೆ. ಅದು ಸಾಯಂಕಾಲದ ವೇಳೆ ಮನೆಯಲ್ಲಿದ್ದವರೆಲ್ಲಾ ಮದುವೆಗೆಂದು ನೆಂಟರಲ್ಲಿಗೆ ಹೋಗಿದ್ದಾರೆ. ದಿನಾಲು ಗೆಳೆಯರ ಜೊತೆ ಇರುತ್ತಿದ್ದ ನಾನು ಅಂದು ಏಕಾಂಗಿಯಾಗಿ ಬಂಧಿಸಲ್ಪಟ್ಟ ಕೈದಿಯಂತಾದೆ. ಆ ಸ್ಥಿತಿಯಲ್ಲಿ ಉಪವಾಸವಿದ್ದರೂ ಚಿಂತೆಯಿಲ್ಲ ಒಬ್ಬಂಟಿಗನಾಗಿರಬಾರದು ಎನಿಸುತ್ತಿತ್ತು.
  ಪ್ರತಿದಿನ ಚಿಕ್ಕ ಚಿಕ್ಕ ಮಕ್ಕಳಿಂದ ತುಂಬಿ ಗಿಜಗಿಡುತ್ತಿದ್ದ ಮನೆ ಮುಂದಿನ ಕಟ್ಟೆ ಯಾರಿಲ್ಲದೇ ಬೀಕೊ ಎನ್ನುತಿತ್ತು, ಯಾವ ಗೆಳೆಯರ ಪತ್ತೆಯೂ ಇಲ್ಲ. ಅನ್ಯ ಮಾರ್ಗವಿಲ್ಲದೆ ಟಿ.ವಿ.ಮುಂದೆ ಕುಳಿತುಕೊಳ್ಳಲೇ ಬೇಕಾಯಿತು. ಯಾವ ಸುದ್ದಿ ವಾಹಿನಿ ತೆಗೆದರೂ ರಾರಾಜಿಸುವ ರಾಜಕೀಯ ಸುದ್ದಿಗಳು, ಬೇಸರವಾಗಿ, ಸಂಗೀತದ ಗಾಳಿ ಗಂಧವೂ ತಿಳಿಯದಿದ್ದರೂ ಸಿನೆಮಾ ಹಾಡುಗಳೆಂದರೆ ಪ್ರಾಣವೆಂಬಂತೆ ಆಲಿಸುವ ನಾನು ಯು2 ಚಾನಲ್‍ನ ಸಂಖ್ಯೆಯನ್ನು ಅದುಮಿದ್ದೇ ತಡ ಒಂದಕ್ಕಿಂತ ಒಂದು ಭಿನ್ನವಾದ ಹಾಡುಗಳು.
  ಪರದೆಯಲ್ಲಿನ ನಟನಿಗೆ ಅನುಸರಿಸುತ್ತಾ ಅವನಿಗಿಂತ ಜೋರಾಗಿ ಹಾಡತೊಡಗಿದೆ. ಕೈಕಾಲುಗಳು ತಾನಾಗಿಯೆ ಕುಣಿಯಲು ಆರಂಭಿಸಿದವು. ಉತ್ತಮ ಕೆಲಸಕ್ಕೆ ಹಲವಾರು ವಿಘ್ನಗಳು ಎಂಬಂತೆ ಇದ್ದಕಿದ್ದಂತೆ ಕರೆಂಟ್ ಕಟ್ಟಾಗಿ ಟಿ.ವಿ ಹಾಡುವುದನ್ನು ನಿಲ್ಲಿಸಿತು, ನನ್ನ ಹಾಡು ಮಾತ್ರ ನಡೆಯುತ್ತಲೇ  ಇತ್ತು. ಆ ಹಾಡುಗಳಲ್ಲಿ ಮಗ್ನನಾದ ನಾನು ಕರ್ಕಶ ದ್ವನಿಯಲ್ಲಿ ಗಟ್ಟಿಯಾಗಿ “ಯಾರೊ ಈ ಭೂಮಿಗೆ ಪ್ರೀತಿಯಾ ತಂದರು” ಎಂದು ಅರಚುತ್ತಾ ಮನೆ ಮುಂದಿರುವ ರಸ್ಥೆಗೆ ಬಂದು ಬಿಟ್ಟೆ. ಸಮಯ ಕಳೆದಂತೆಲ್ಲ ವ್ಯಾಲ್ಯೂಮ್ ಹೆಚ್ಚುತ್ತಲೇ ಇತ್ತು. ನನ್ನದೇ ಲೋಕದಲ್ಲಿ ತೇಲಾಡುತ್ತಿರುವಾಗ ಕಣ್ಮುಂದೆ ಏನೋ ಹಾದು ಹೋದಂತಾಗಿ ಎಚ್ಚರಗೊಂಡು ಕಣ್ಬಿಟ್ಟು ಕತ್ತು ತಿರುಗಿಸಿ ಅತ್ತಿತ್ತ ನೋಡಿದಾಗ ಓಣಿಯ ಮಹಿಳೆಯರೆಲ್ಲರೂ ಸುತ್ತುರಿದು ನಿಂತಿದ್ದಾರೆ. ಪ್ರತಿಯೊಂದು ಮುಖವು ಮುಸು ಮುಸು ನಗು ಸೂಸುತ್ತಿದೆ.
    ವಾವ್..! ನನ್ನ ಹಾಡಿಗೂ ಅಭಿಮಾನಿಗಳಾ? ಅಂದು ಕೊಚ್ಚಿಕೊಳ್ಳುವ ಹಾಗಿರಲಿಲ್ಲ. ಯಾಕೆ  ಇಷ್ಟೊಂದು ಜನ ಸೇರಿದ್ದೀರಿ ಅಂದು ಪ್ರಶ್ನಿಸುವ ಹಾಗೂ ಇರಲಿಲ್ಲ. ಅಲ್ಲಿಯವರೆಗೂ ನನ್ನ ಕಂಠದಿಂದ ಹೊರಬಂದ ಜೋರಾದ ದ್ವನಿ ಎಂದೂ ಕೇಳಿರಲಿಲ್ಲ. ಕಠೋರವಾದ ದ್ವನಿ ಕಿವಿಗೆ ಬಿದ್ದೊಡನೆ ಎಲ್ಲಿ ಏನಾಯಿತೊ ಎಂದುಕೊಂಡು ನಾನಿದ್ದಲ್ಲಿಗೆ ಧಾವಿಸಿದರಂತೆ. ನಗುವವರ ಮುಂದೆ ಹಲ್ಲು ಕಿರಿದು ನಾಲಿಗೆ ಕಚ್ಚಿ ಮುಖ ಅವುಚಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಹಾಡುವುದು ನನ್ನಿಷ್ಟ, ಮನಬಂದಂತೆ ಹಾಡುತ್ತೇನೆ ಅಂದುಕೊಳ್ಳುವುದು ತಪ್ಪೆಂದು ಎನಿಸತೊಡಗಿತು. ಎಲ್ಲಾದರೂ ಹಾಡು ಕೇಳಿ ಅದನ್ನು ಗುನುಗುವಾಗಲೆಲ್ಲ ಈ ಘಟನೆ ನೆನಪಾಗಿ ನಗು ಉಕ್ಕುತ್ತದೆ.