Tuesday, January 21, 2014



ಹುಡುಗರೇ ದೇವದಾಸ್ ಆಗೋದು ಯಾಕೆ ?


      ಒಂದು ಕಾಲಕ್ಕೆ ದೇವದಾಸ ಅನ್ನೋ ಪದಕ್ಕೆ ಬಹಳಷ್ಟು ಬೆಲೆ ಇತ್ತು. ಈ ಹೆಸರು ಕೇಳಿದೊಡನೆ ಗೌರವ ಭಾವನೆ ಮೂಡುತ್ತಿತ್ತು. ರಾಮದಾಸ, ಪುರಂದರದಾಸ, ಗುರುದಾಸ ಇಂತಹ ಹೆಸರುಗಳು ಪಟ ಪಟನೆ ಸ್ಮತಿ ಪಟಲದಲ್ಲಿ ಹಾದು ಹೋಗುತ್ತಿದ್ದವು.
  ಇವಾಗ ಹಾಗಲ್ಲರಿ,,, ದೇವದಾಸ ಎಂದೊಡನೆ ಬಾರ್, ರಮ್ಮು ವಿಸ್ಕಿ ವೋಡ್ಕಾ ಮತ್ತೆ ವಿಶೇಷವಾಗಿ ಬ್ಲೇಡು ಕಾಣದ, ಕೆದರಿದ ಗಡ್ಡ ಕಣ್ಮುಂದೆ ಬರುತ್ತದೆ. ಇವರು ಸಹ ದಾಸರೆ, ವ್ಯತ್ಯಾಸ ಇಷ್ಟೆ ಅವರು ಮನೆ, ಹೆಂಡತಿ ಮಕ್ಕಳನ್ನು ಬಿಟ್ಟು ದಾಸರಾದರೆ ಇವರು ಹುಡುಗಿ ಕೈ ಕೊಟ್ಟದ್ದಕ್ಕಾಗಿ ದಾಸರಾಗಿದ್ದಾರೆ ಅವರು ದೇವರ ದಾಸರಾದರೆ ಇವರು ಸರಾಯಿಯ ದಾಸರಾಗಿರುತ್ತಾರೆ. ಅವರು ಯಾವುದೋ ಮಠವನ್ನು ಕಾವಲು ಮಾಡಿದರೆ ಇವರು ಬಾರ್ ಕಾಯುವುದನ್ನು ಮಾಡುತ್ತಾರೆ.

   ಪ್ರೀತಿಯೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದೆಂದು ಅಂದು ಗಾಂಧಿ ಹೇಳಿದ್ದರು (ಶಾರುಖ್ ಖಾನ್ ಅನೇಕ ಸಿನೆಮಾಗಳಲ್ಲಿ ಸಾಬೀತು ಮಾಡಿದ್ದಾರೆ) ಪ್ರೀತಿ ಅನ್ನೋ ಒಂದೇ ಒಂದು ವಿಷಯವನ್ನಿಟ್ಟುಕೊಂಡು ವಿಶ್ವವಿಖ್ಯಾತರಾದವರನ್ನು ನೋಡಿದ್ದೇವೆ. ಪ್ರೀತಿಗಾಗಿ ಎಲ್ಲಾವನ್ನು ತ್ಯಾಗ ಮಾಡಿದವರನ್ನು ಸಹ ಕಂಡಿದ್ದೇವೆ ಇಂದು ಇದೇ ಪ್ರೀತಿಗಾಗಿ ನಮ್ಮ ಅನೇಕ ಯುವ ಮಿತ್ರರು ಹೀನಾಯ ಸ್ಥಿತಿಗೆ ತಲುಪಿರುವುದು ಖೇದಕರವಲ್ಲವೇ?

 ನಿಜವಾಗಲೂ ಇದಕ್ಕೆ ಪ್ರೀತಿನೇ ಕಾರಣನಾ?
   
    ಖಂಡಿತವಾಗಿಯೂ ಅಲ್ಲ. ಪ್ರೀತಿ ಕೆರಳಿದ ಜೀವನವನ್ನು ಹೂವಿನಂತೆ ಅರಳಿಸುತ್ತದೆ. ದುಷ್ಟ ವೈರಿಯನ್ನು ಇಷ್ಟದ ಸ್ನೇಹಿತನಾಗಿ ಮಾಡುತ್ತದೆ, ತುಳಿಯುವ ಕಲ್ಲನ್ನು ಬೆಳೆಯುವ ದೇವಾಲಯವನ್ನಾಗಿ ಮಾಡುತ್ತದೆ ಆದರೆ ಪ್ರತಿ ದೇವದಾಸರನ್ನು ಏಕಪ್ಪಾ ಹೀಗಾದೆ ಎಂದು ಕೇಳಿದರೆ ಇದಕ್ಕೆಲ್ಲ ಕಾರಣ ಪ್ರೀತಿ ಅಂತಲೇ ಹೇಳುತ್ತಾರೆ. ಆದರೆ ಎಡವಟ್ಟಾಗಿರೋದು ಎಲ್ಲಿ ಅಂತ ತಿಳಿದುಕೊಳ್ಳುವುದು ಅತಿ ಮುಖ್ಯ.
 ಹರೆಯದಲ್ಲಿ ಲೈಂಗಿಕ ಕಾಮನೆ ಮತ್ತು ದೈಹಿಕ ಆಕರ್ಷಣೆಗಳಿರುವುದು ಸಹಜ. ಅದೇ ಈ ಸಮಯದಲ್ಲಿ ಸಾಮಾನ್ಯವಾಗಿ ಸ್ನೇಹಿತೆ (ಲವರ್) ಹೊಂದಬೇಕೆಂಬ ಆಸೆ ಎಲ್ಲ ಹುಡುಗರಲ್ಲಿಯೂ ಇದ್ದೇ ಇರುತ್ತದೆ ಅದರಂತೆ ಹುಡುಕಾಟ ಆರಂಭಿಸುತ್ತಾರೆ. ಇಂದಿನ ಕಾಲದಲ್ಲಿ ಹುಡುಗಿಯರಿಗೇನು ಕೊರತೆಯಿಲ್ಲ ಆದರೆ ಒಳ್ಳೇ ಹುಡುಗಿ ಸಿಗಬೇಕಲ್ಲವೇ? ನಿಜವಾಗಲೂ ಎಡವಟ್ಟಾಗೋದು ಇಲ್ಲಿಯೆ.

  ಕಲರ್ ಕಲರ್ ಮ್ಯಾಚಿಂಗ್ ಡ್ರೆಸ್‍ಗಳನ್ನು ಧರಿಸಿ, ಮಾರ್ಕೆಟ್‍ನಲ್ಲಿ ಇದ್ದ ಎಲ್ಲಾ ಸೌಂದರ್ಯವರ್ಧಕಗಳನ್ನೂ(ಕಾಸ್ಮೆಟಿಕ್ಸ್) ಮುಖಕ್ಕೆ ಪೂಸಿಕೊಂಡು ಸುಂದರಾತಿ ಸುಂದರಳು ಎನ್ನುವಂತೆ ಫೋಸು ಕೊಡುವ ಹುಡುಗಿರನ್ನು ಕಂಡಾಗ ಇಂಥ ಹುಡುಗಿ ನನ್ನವಳಾಗಿದ್ದರೆ ಚೆನ್ನಾಗಿರುತ್ತದೆ ಎನ್ನುವ ಆಲೋಚನೆ ಎಲ್ಲರದ್ದು ಅದರಂತೆ ಅವಳು ಹೋದಲ್ಲೆಲ್ಲ ಅಲೆದು ಅವಳನ್ನು ಪಟಾಯಿಸಲು ವಿಧ ವಿಧದ ಸರ್ಕಸ್ ಮಾಡಲು ಆರಂಭಿಸುತ್ತಾರೆ ಇದನ್ನೇ ಕಾಯುವ ಅವಳು ಸುಮ್ಮನೆ ಬಿಡುತ್ತಾಳಾ? ಯಾವುದಾದರೂ ಕೆಲಸಕ್ಕೆ ಬರುತ್ತಾನೆ ಅಂದುಕೊಂಡು ಗೆಳೆತಿಯಂತೆ ನಟಿಸಲು ಆರಂಭಿಸುತ್ತಾಳೆ, ನೀನಿಲ್ಲದೆ ಜೀವನವೇ ಇಲ್ಲ ಅನ್ನೋ ತರ ಆಡುತ್ತಾಳೆ. ಒಂದು ದಿನ ಆ ಕಾಲ ಬಂದೇ ಬಿಡುತ್ತದೆ ಬಹಳ ದಿನಗಳಿಂದ ಚಾತಕ ಪಕ್ಷಿಯಂತೆ ನೀವು ಕಾಯುತ್ತಿರುವ love u to
ಅನ್ನೋ ಉತ್ತರ ಬಂತೆಂದರೆ ಸಾಕು ಇಹಲೋಕದ ಸುಂದರ ಸ್ವರ್ಗದಂತೆ ಕಾಣುವ ನಾಟಕೀಯ ಪ್ರೀತಿಯ ಬರಡು ಪ್ರಪಾತಕ್ಕೆ ಬಿದ್ದಂತೆಯೆ.
   ಮೊಬೈಲ್ ಕರೆನ್ಸಿ, ಸ್ಪೆಷಲ್ ಕಾಲ್‍ರೇಟ್ ಪ್ಯಾಕು, ಬರ್ಥಡೇ ಗಿಫ್ಟು ಅಂತ ಇದ್ದ ಎಲ್ಲವನ್ನು ಕಳೆದುಕೊಂಡ ಮೇಲೆ ಅಂತು ಇಂತು ಆ ಸುಂದರಿಯನ್ನು ಪಡೆದೆನಲ್ಲ ಅನ್ನೋ ಖುಷಿಯಲ್ಲಿ ಅಪ್ಪನು ತಂದಿಟ್ಟಿದ್ದ ಮೆತ್ತನೆ ಸೋಫಾದ ಮೇಲೆ ಒರಗಿಕೊಂಡು ಯಾವ ಸೀನಿಮಾಗು ಕಮ್ಮಿಯಿಲ್ಲ ಅನ್ನುವಂತೆ ಮುಂದಿನ ಜೀವನ ಅವಳ ಜೊತೆ ಹೇಗಿರಬೇಕೆಂಬ ಸುಂದರ ಕನಸನ್ನು ಕಾಣುತ್ತಿರುವಾಗ ಎಲ್ಲಿಂದಲೋ ಫೋನು ರಿಂಗಣಿಸುವ ಶಬ್ದವಾದಂತಾಗಿ ಎಚ್ಚರಗೊಂಡು ಕಣ್ಣುಗಳನ್ನು ವರೆಸಿಕೊಳ್ಳುತ್ತಾ ಓ ನಂದೆ ಅರೆ! ಅವಳೆ! ಅವಳಿಗೆ ಸಾವೆ ಇಲ್ಲ ನೂರು ಕಾಲ ಬದುಕುತ್ತಾಳೆ ಎಂದು ಯಾವಾಗಲೋ ಹೇಳಿದ ಅಜ್ಜನ ಮಾತುಗಳ ನೆನಪು ಬೇರೆ ಹಾಗೆಯೆ ಮೆತ್ತಗೆ ರಿಸೀವ್ ಬಟನ್ ಅದುಮಿ ಫೋನ್ ಕಿವಿಗೆ ತಾಗಿಸಿದಾಗ ಅಹಾ! ಅದೇ ಸುಮಧುರ ಕಂಠದಿಂದ "sorry ಇನ್ಮುಂದೆ ಭೇಟಿಯಾಗಕ್ಕಾಗಲ್ಲ, ನಮ್ಮ ಡ್ಯಾಡಿ ಎಂಗೇಜ್‍ಮೆಂಟ್ ಫಿಕ್ಸ್ ಮಾಡಿದ್ದಾರೆ ಪ್ಲೀಸ್ ಇನ್ಮುಂದೆ ಕಾಲ್ ಮಾಡಲು ಪ್ರಯತ್ನಿಸಬೇಡ” ಅನ್ನೋ ಮಾತು ಕೇಳಿದೊಡನೆ ಅಘಾತವಾದಂತಾಗಿ ಎನ್...ಎನ್...ಎನ್..! ಅನ್ನುವಷ್ಟರಲ್ಲಿಯೇ ಕಾಲ್ ಕಟ್ ಆಗಿರುತ್ತೆ ಮುಂದೆ ಏನಾಗುತ್ತೆ ಅನ್ನೋದು ಅಂದಾಜಿಸಬಹುದು ನೀವಂದುಕೊಂಡಂತೆ ಕಣ್ಣಿಗೆ ಬಿದ್ದ ಹುಡುಗಿಯರನ್ನೆಲ್ಲಾ ದ್ವೇಷಿಸುತ್ತಾ, ಅದೇ ಕಿತ್ತೋಗಿರೋ ಹಳೆ ಹ್ಯಾಂಡ್ ಸೆಟ್‍ನಲ್ಲಿ love ಫೀಲಿಂಗ್ ಸಾಂಗ್ ಕೇಳುತ್ತಾ ಆಗಿಯೇ ಬಿಟ್ಟ ದೇವದಾಸ.

 ಈ ವಯಸ್ಸಲಿ ಯುವಕರು ತನ್ನ ಭವಿಷ್ಯ ರೂಪಿಸಿಕೊಳ್ಳೊದಲ್ಲದೇ ದೇಶದ ಭವಿಷ್ಯದ ಕನಸ್ಸನ್ನು ಕಾಣುವ ಬದಲು ಯಾವುದೋ ಆಕರ್ಷಣೆಗೆ ಒಳಗಾಗಿ ಸಂಗಾತಿ ಹುಡುಕುವ ಆತುರದಲ್ಲಿ ತೆಗೆದುಕೊಂಡ ತಪ್ಪು ನಿರ್ಣಯದಿಂದ ಮನೆಯವರಿಂದ, ಸಮಾಜದಿಂದ ತಿರಸ್ಕøತರಾಗಿ ಅವರ ಇಡೀ ಜೀವನವೇ ನರಕವನ್ನಾಗಿ ಮಾಡಿಕೊಳ್ಳುತ್ತಾರೆ.
  ಹಾಗಂತ ಎಲ್ಲಾ ಹುಡುಗಿಯರು ಕೆಟ್ಟವರು ಎಂದು ಹೇಳೋಕಾಗಲ್ಲ. ಕೆಲ ಹುಡುಗಿಯರ ಅಪಕೃತ್ಯದಿಂದ ಪ್ರೀತಿ ಅನ್ನೋ ಹೆಸರಿನ ಜೊತೆಗೆ ಎಲ್ಲಾ ಹುಡುಗಿಯರ ಮೇಲೆ ಕಳಂಕ ಬರುತ್ತಿದೆ.
  
 ‘ದೇವದಾಸ’ ದಿಂದ ಮುಕ್ತಿ ಸಾಧ್ಯನಾ ?
  
   ಇಂತಹ ದೇವದಾಸರನ್ನು ಕಂಡ ಗೆಳೆಯರು ಪ್ರೀತಿ ಎಂಬ ಪದ ಕೇಳಿದೊಡನೆ ಬೇಡಪ್ಪೋ ಬೇಡ ಅನ್ನೋ ಮಿತ್ರರು ಎಲ್ಲಾ ಹುಡುಗಿಯರನ್ನು ದ್ವೇಷಿಸಲು ಆರಂಭಿಸುತ್ತಾರೆ. ಆದರೆ ಪ್ರೀತಿಸದೇ ಇರೋಕ್ಕಾಗಲ್ಲ ಪ್ರತಿಯೊಬ್ಬರ ಜೀವನಕ್ಕೆ ಪ್ರೇಮ ಅತ್ಯಗತ್ಯ ಅದಕ್ಕೆ ಪರಿಹಾರ ವಿಲ್ಲವೇ ಅನ್ನೋ ಪ್ರಶ್ನೆ ಮೂಡುತ್ತದೆ ಹಾಗಾದರೆ ಇಲ್ಲಿ ಕೆಳಿ,

  ದುಡುಕೇ ಕೆಡುಕಿನ ಮೂಲ ಎನ್ನುವಂತೆ ಯಾವತ್ತು ದುಡಕದಿರಿ, ಲೇಟ್ ಆದರೂ ಚಿಂತೆಯಿಲ್ಲ ಲೇಟೆಸ್ಟ್ ಆಗಿರೋ, ಮನಸ್ಸಿನಿಂದ ಸುಂದರವಾಗಿರೋ ಗೆಳತಿಯನ್ನು ಆರಿಸಿಕೊಳ್ಳಿರಿ. if choice is right future will be bright.

No comments: