Tuesday, December 17, 2013

Published in samyukta karnataka. Youngturk 26-12-1013 with Titleof avalannu hudukutta

          ಚೆಲುವೆ! ನಿನ್ನ ಹುಡುಕಾಟದಲ್ಲಿ,,,


ಚುಮು ಚುಮು ಚಳಿಯಲ್ಲಿ ಮುಂಜಾನೆ ಸಮಯ ಕಳೆದಷ್ಟು ಹೊದ್ದ ಹೊದಿಕೆ ಇನ್ನಷ್ಟು ಆಪ್ತವಾಗುತ್ತದೆ. ಹಾಗೆಯೆ ಮಲಗಲು ನಿದ್ದೆ ಬರಲೇಬೇಕು ಅಂತೇನಿಲ್ಲ. ಎಕ್ಸಾಂಗಳೆಲ್ಲ ಮುಗಿದು ಚಿಂತಾಮುಕ್ತನಾಗಿಯೇ ಮನೆಗೆ ಬಂದ ನಾನು ಯಾರ ಗೊಡವೇ ನನಗೇಕೆ ಎಂಬಂತೆ ಮುಸುಕು ಹಾಕಿದ್ದೆ. ನಾನು ಮಲಗಿದ್ದೇನೆಂದು ರವಿ ಮಲಗುತ್ತಾನೆಯೇ? 
     ಎಂದಿನಂತೆ ತನ್ನ ಪಾಡಿಗೆ ತಾನು ಮೇಲಕ್ಕೆ ಮೇಲಕ್ಕೆ ಏರುತ್ತಲೇ ಇದ್ದ. ಈ ಕಡೆ ನನ್ನ ಎಬ್ಬಿಸಲು ಅಮ್ಮನ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದವು. ಚಾಣಕ್ಯ ಪ್ರತಿಜ್ಞೆ ಮಾಡಿದಳೇನೋ ಎಂಬಂತೆ ಅಮ್ಮನ ದ್ವನಿಯೂ ಏರುಗತಿಗೆ ತಿರುಗುತ್ತಿತ್ತು. ಯಾವುದಕ್ಕೂ ಜಗ್ಗದಿದ್ದಾಗ ಒಂದು ಉಪಾಯ ಮಾಡಿ “ಚಾಯ್ ಖಾಲಿಯಾಗುತ್ತಿದೆ ಇನ್ನು ತಡವಾದರೆ ಸಿಗಲ್ಲ” ಎನ್ನುವ ಅಮ್ಮನ ಮಾತು  ಮುಗಿಯುವಷ್ಟರಲ್ಲಿಯೇ ಏನ್ ಕಳೆದೊಯಿತು ಎನ್ನುವಂತೆ ಎದ್ದು ಹಳಸು ಮುಖದಲ್ಲೇ ಮುಂದೆ ಹೋಗಿ ನಿಂತುಕೊಂಡೆ. ಅಮ್ಮನಿಗೆ ನನ್ನ ವೀಕ್‍ನೆಸ್ ಟೀ ಅಂತ ಚೆನ್ನಾಗಿ ಗೊತ್ತಿತ್ತು. ನೀನ್ ಮಾತ್ರ ಸರಿ ದಾರಿಗೆ ಬರಲ್ಲ ಎನ್ನುವ ಗೋಳು ಕೇಳುತ್ತಲೇ ರುಚಿ ರುಚಿಯಾದ ಚಾಯ್ ಹೀರಿ ಗ್ಲಾಸ್ ಖಾಲಿ ಮಾಡಿಬಿಟ್ಟೆ.
  
  ದಿನಚರಿಗಳೆಲ್ಲ ಮುಗಿಸಿದ ನಾನು ನನಗಾಗಿಯೇ ಕಾಯುತ್ತಿದ್ದ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ‘ಡಿ’ ವಿಟಮಿನ್ ಹೀರುತ್ತಾ ಈವತ್ತೇನು ಮಾಡುವುದೆಂದು ಯೋಚಿಸುತ್ತಿರುವಾಗಲೆ ಕಣ್ಮುಂದೆ ಏನೋ ಹಾದು ಹೋದಂತಾಯಿತು. ಏನೆಂದು ಯೋಚಿಸುತ್ತಿರುವಾಗಲೇ “ರೇಖಾ ಬೇಗ ಬಾ” ಎನ್ನುವ ಪಕ್ಕದ್ಮನೆ ಅಂಟಿಯ ದ್ವನಿ ಕೇಳಿಸಿತ್ತು ಆ ದ್ವನಿಯ ಗುರಿ ಎಲ್ಲಿದೆಯೆಂದು ಹಿಂದಕ್ಕೆ ತಿರುಗಿ ನೋಡಿದಾಗ ಕಂಡವಳೇ ಆ ಚಲುವೆ. ಸೌಂದರ್ಯ ಏನು ಅಂತ ನನಗೆ ಗೊತ್ತಾಗಿದ್ದೇ ಆವತ್ತು. ಎಲ್ಲವನ್ನು ಮರೆತುಬಿಟ್ಟೆ. ಕಾಲುಗಳು ತನ್ನಷ್ಟಕ್ಕೆ ತಾನು ಅವಳೆಡೆಗೆ ಚಲಿಸಲಾರಂಭಿಸಿದವು. ಮುಂಜಾನೆ ಎಷ್ಟೇ ಪ್ರಯತ್ನಪಟ್ಟರೂ ತೆರೆಯಲೊಲ್ಲೆ ಎನ್ನುವ ಕಣ್ಣ ರೆಪ್ಪೆಗಳು ತಮ್ಮ ಕೆಲಸವನ್ನೇ ಮರೆತಂತೆ ಸ್ಥಬ್ದವಾಗಿ ನಿಂತು ಬಿಟ್ಟವು. ನನಗರಿವಿಲ್ಲದೆ ಮನೆ ಪಕ್ಕದ ರೋಡಿನ ಮೇಲೆ ಬಂದು ಬಿಟ್ಟೆ. ನೋಡ ನೋಡುತ್ತಲೇ ಸನಿಹದಿಂದ ಹಾದು ಹೋದಳು. ಅವಳಿಂದ ಸುಳಿದು ಬಂದ ಗಾಳಿ ನನ್ನನ್ನು ಸ್ಪರ್ಶಿಸಿ ಮೈಯೆಲ್ಲಾ ರೋಮಾಂಚನ ಉಂಟು ಮಾಡಿತ್ತು. ಆಮೇಲೆ ಅವಳು ನನ್ನಂತೆ ರಜೆ ಕಳೆಯಲು ಪಕ್ಕದ ಮನೆ ಶಾರದಾ ಆಂಟಿಯ  ಮನೆಗೆ ಬಂದಿದ್ದಾಳೆಂದು ತಿಳಿಯಿತು.

    ಅಂದಿನಿಂದ ನನ್ನ ದಿನಚರಿಯೇ ಬದಲಾಯಿತು. ಬೆಳಿಗ್ಗೆ ಬೇಗ ಏಳುವುದು ಒಂದು ದೊಡ್ಡ ಸಾಧನೆ ಎಂಬಂತೆ ಮಾಡುತ್ತಿದ್ದ ನಾನು ಎಲ್ಲರಿಗಿಂತ ಮೊದಲು (ಸೂರ್ಯನಿಗಿಂತ) ಏಳಲು ಆರಂಭಿಸಿದೆ. ಅಮ್ಮನಿಗೆ ಒಂಥರ ಖುಷಿ ಎನಿಸಿದರೂ ಒಳಗೊಳಗೆ ಏನೋ ಇದೆ ಎಂದು ಶಂಕಿಸತೊಡಗಿದಳು. ದಿನಾಲು ಬೆಳಿಗ್ಗೆ ಅವಳ ಮುಖ ನೋಡಿದರೆನೇ ಆನಂದ. ಆ ಇಂಪು ದ್ವನಿ ಕೇಳಲು ಕಿವಿಗಳು ಯಾವಾಗಲು ಕಾತರಿಸುತ್ತಿದ್ದವು. ದಿನಾ ಅವಳನ್ನು ನೋಡುವುದೇ ನನ್ನ ಕಾಯಕವಾಯಿತು. ಒಂದೊಂದು ಸಲ ಅವಳೂ ನನ್ನೆಡೆಗೆ ಕಣ್ಣು ಹಾಯಿಸಿದಾಗ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾಳೆಂದು ಅನಿಸುತ್ತಿತ್ತು. ಅವಳ ಸೌಂದರ್ಯಕ್ಕೆ ಮೊದಲ ನೋಟದಲ್ಲೇ ಸೋತುಹೋಗಿದ್ದ ನಾನು ಒಂದು ದಿನ ಮನಸಲ್ಲಿನ ಭಾವನೆ ಹೇಳಿಯೇ ಬಿಡೋಣವೆಂದು ಧೃಢ ನಿರ್ಧಾರ ಮಾಡಿ, ಅಂಜಿಕೆ ಅಳುಕುಗಳನ್ನೆಲ್ಲಾ ತೆಗೆದು  ಹಾಕಿ ಆಂಟಿ ಮನೆ ಮುಂದೆ ಹೋಗಿ ನಿಂತಾಗ ದೊಡ್ಡ ಅಘಾತವೇ ಕಾದಿತ್ತು. ಆಕಾಶವೇ ಮೇಲೆ ಕಳಚಿ ಬಿತ್ತೇನೋ ಅನ್ನುವಂತೆ ಭಾಸವಾಯಿತು.
  
ಏಕೆಂದು ಕೇಳುತ್ತೀರಾ?
    
   ಕೈಯಲ್ಲಿ ಬ್ಯಾಗ್ ಹಿಡಿದು ಮನೆಯವರಿಗೆ ಟಾಟಾ, ಬೈ, ಟೇಕ್ ಕೇರ್ ಎನ್ನುತ್ತಿದ್ದಂತೆ ಅವರು ನುಸುನಗುತ್ತಾ ಕೈ ಮೇಲೆತ್ತಿ ಅಲುಗಾಡಿಸಿ ಬೈ, ಬೈ ರೇಖಾ ಚನ್ನಾಗಿ ಓದಿಕೊ ಎನ್ನುತ್ತಿದ್ದರು ಅವಳಿಂದ ಹೊರಡುವ ಟಾ-ಟಾ, ಬೈ-ಬೈ ಎನ್ನುವ ಶಬ್ದಗಳು ನನ್ನೆದೆಯಿಂದ ಈಟಿಯಂತೆ ಹಾದುಹೋಗುತ್ತಿದ್ದವು ನಾನಾಗ ಅಸಹಾಯಕ. ಯಾರಗೊಡವೆಗೆ ಹೊಗದೆ ಮನೆಯವರನ್ನು ರೇಗಿಸುತ್ತಾ  ಆನಂದದಿಂದ ಇದ್ದ ನನಗೆ  ನಾಲ್ಕು ದಿನಗಳು ಸ್ವರ್ಗದಂತೇನೊ ಎನಿಸಿದವು ನಂತರದ ಗೋಳು ನಡುಬಿಸಿಲಲ್ಲಿ ಕೆಂಪು ಚೇಳು ಕಡಿದಾಗ ಆಗುವಂತ ಯಾತನೆ. ಮಿಂಚಿನಂತೆ ಬಂದವಳು ಅದರಂತೆಯೇ ಬೇಗ ಮಾಯವಾದಳು. ಈಗ  ಆ ದಿನಗಳನ್ನು ಮರೆತ್ತಿದ್ದೇನೆ ಆದರೆ ಎಲ್ಲಿ ಹೋದರೂ ಅವಳೇ ಕಣ್ಮುಂದೆ ಬಂದಂತಾಗುತ್ತದೆ ಎಲ್ಲೋ ಒಂದು ಕಡೆ ಆ ಮಿಂಚು ಮತ್ತೆ ಕಣ್ಣಿಗೆ ಗೋಚರಿಸುವುದೇನೋ ಅನ್ನೋ ಸಣ್ಣ ಆಶಾಕಿರಣ ಸುಳಿದಾಡುತ್ತಿದೆ.

 ನಿಮ್ ಕಣ್ಣಿಗೆ ಬಿದ್ದರೆ ತಿಳಿಸುವಿರಾ.....?

No comments: