Tuesday, December 17, 2013

Published in samyukta karnataka. Youngturk 26-12-1013 with Titleof avalannu hudukutta

          ಚೆಲುವೆ! ನಿನ್ನ ಹುಡುಕಾಟದಲ್ಲಿ,,,


ಚುಮು ಚುಮು ಚಳಿಯಲ್ಲಿ ಮುಂಜಾನೆ ಸಮಯ ಕಳೆದಷ್ಟು ಹೊದ್ದ ಹೊದಿಕೆ ಇನ್ನಷ್ಟು ಆಪ್ತವಾಗುತ್ತದೆ. ಹಾಗೆಯೆ ಮಲಗಲು ನಿದ್ದೆ ಬರಲೇಬೇಕು ಅಂತೇನಿಲ್ಲ. ಎಕ್ಸಾಂಗಳೆಲ್ಲ ಮುಗಿದು ಚಿಂತಾಮುಕ್ತನಾಗಿಯೇ ಮನೆಗೆ ಬಂದ ನಾನು ಯಾರ ಗೊಡವೇ ನನಗೇಕೆ ಎಂಬಂತೆ ಮುಸುಕು ಹಾಕಿದ್ದೆ. ನಾನು ಮಲಗಿದ್ದೇನೆಂದು ರವಿ ಮಲಗುತ್ತಾನೆಯೇ? 
     ಎಂದಿನಂತೆ ತನ್ನ ಪಾಡಿಗೆ ತಾನು ಮೇಲಕ್ಕೆ ಮೇಲಕ್ಕೆ ಏರುತ್ತಲೇ ಇದ್ದ. ಈ ಕಡೆ ನನ್ನ ಎಬ್ಬಿಸಲು ಅಮ್ಮನ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದವು. ಚಾಣಕ್ಯ ಪ್ರತಿಜ್ಞೆ ಮಾಡಿದಳೇನೋ ಎಂಬಂತೆ ಅಮ್ಮನ ದ್ವನಿಯೂ ಏರುಗತಿಗೆ ತಿರುಗುತ್ತಿತ್ತು. ಯಾವುದಕ್ಕೂ ಜಗ್ಗದಿದ್ದಾಗ ಒಂದು ಉಪಾಯ ಮಾಡಿ “ಚಾಯ್ ಖಾಲಿಯಾಗುತ್ತಿದೆ ಇನ್ನು ತಡವಾದರೆ ಸಿಗಲ್ಲ” ಎನ್ನುವ ಅಮ್ಮನ ಮಾತು  ಮುಗಿಯುವಷ್ಟರಲ್ಲಿಯೇ ಏನ್ ಕಳೆದೊಯಿತು ಎನ್ನುವಂತೆ ಎದ್ದು ಹಳಸು ಮುಖದಲ್ಲೇ ಮುಂದೆ ಹೋಗಿ ನಿಂತುಕೊಂಡೆ. ಅಮ್ಮನಿಗೆ ನನ್ನ ವೀಕ್‍ನೆಸ್ ಟೀ ಅಂತ ಚೆನ್ನಾಗಿ ಗೊತ್ತಿತ್ತು. ನೀನ್ ಮಾತ್ರ ಸರಿ ದಾರಿಗೆ ಬರಲ್ಲ ಎನ್ನುವ ಗೋಳು ಕೇಳುತ್ತಲೇ ರುಚಿ ರುಚಿಯಾದ ಚಾಯ್ ಹೀರಿ ಗ್ಲಾಸ್ ಖಾಲಿ ಮಾಡಿಬಿಟ್ಟೆ.
  
  ದಿನಚರಿಗಳೆಲ್ಲ ಮುಗಿಸಿದ ನಾನು ನನಗಾಗಿಯೇ ಕಾಯುತ್ತಿದ್ದ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ‘ಡಿ’ ವಿಟಮಿನ್ ಹೀರುತ್ತಾ ಈವತ್ತೇನು ಮಾಡುವುದೆಂದು ಯೋಚಿಸುತ್ತಿರುವಾಗಲೆ ಕಣ್ಮುಂದೆ ಏನೋ ಹಾದು ಹೋದಂತಾಯಿತು. ಏನೆಂದು ಯೋಚಿಸುತ್ತಿರುವಾಗಲೇ “ರೇಖಾ ಬೇಗ ಬಾ” ಎನ್ನುವ ಪಕ್ಕದ್ಮನೆ ಅಂಟಿಯ ದ್ವನಿ ಕೇಳಿಸಿತ್ತು ಆ ದ್ವನಿಯ ಗುರಿ ಎಲ್ಲಿದೆಯೆಂದು ಹಿಂದಕ್ಕೆ ತಿರುಗಿ ನೋಡಿದಾಗ ಕಂಡವಳೇ ಆ ಚಲುವೆ. ಸೌಂದರ್ಯ ಏನು ಅಂತ ನನಗೆ ಗೊತ್ತಾಗಿದ್ದೇ ಆವತ್ತು. ಎಲ್ಲವನ್ನು ಮರೆತುಬಿಟ್ಟೆ. ಕಾಲುಗಳು ತನ್ನಷ್ಟಕ್ಕೆ ತಾನು ಅವಳೆಡೆಗೆ ಚಲಿಸಲಾರಂಭಿಸಿದವು. ಮುಂಜಾನೆ ಎಷ್ಟೇ ಪ್ರಯತ್ನಪಟ್ಟರೂ ತೆರೆಯಲೊಲ್ಲೆ ಎನ್ನುವ ಕಣ್ಣ ರೆಪ್ಪೆಗಳು ತಮ್ಮ ಕೆಲಸವನ್ನೇ ಮರೆತಂತೆ ಸ್ಥಬ್ದವಾಗಿ ನಿಂತು ಬಿಟ್ಟವು. ನನಗರಿವಿಲ್ಲದೆ ಮನೆ ಪಕ್ಕದ ರೋಡಿನ ಮೇಲೆ ಬಂದು ಬಿಟ್ಟೆ. ನೋಡ ನೋಡುತ್ತಲೇ ಸನಿಹದಿಂದ ಹಾದು ಹೋದಳು. ಅವಳಿಂದ ಸುಳಿದು ಬಂದ ಗಾಳಿ ನನ್ನನ್ನು ಸ್ಪರ್ಶಿಸಿ ಮೈಯೆಲ್ಲಾ ರೋಮಾಂಚನ ಉಂಟು ಮಾಡಿತ್ತು. ಆಮೇಲೆ ಅವಳು ನನ್ನಂತೆ ರಜೆ ಕಳೆಯಲು ಪಕ್ಕದ ಮನೆ ಶಾರದಾ ಆಂಟಿಯ  ಮನೆಗೆ ಬಂದಿದ್ದಾಳೆಂದು ತಿಳಿಯಿತು.

    ಅಂದಿನಿಂದ ನನ್ನ ದಿನಚರಿಯೇ ಬದಲಾಯಿತು. ಬೆಳಿಗ್ಗೆ ಬೇಗ ಏಳುವುದು ಒಂದು ದೊಡ್ಡ ಸಾಧನೆ ಎಂಬಂತೆ ಮಾಡುತ್ತಿದ್ದ ನಾನು ಎಲ್ಲರಿಗಿಂತ ಮೊದಲು (ಸೂರ್ಯನಿಗಿಂತ) ಏಳಲು ಆರಂಭಿಸಿದೆ. ಅಮ್ಮನಿಗೆ ಒಂಥರ ಖುಷಿ ಎನಿಸಿದರೂ ಒಳಗೊಳಗೆ ಏನೋ ಇದೆ ಎಂದು ಶಂಕಿಸತೊಡಗಿದಳು. ದಿನಾಲು ಬೆಳಿಗ್ಗೆ ಅವಳ ಮುಖ ನೋಡಿದರೆನೇ ಆನಂದ. ಆ ಇಂಪು ದ್ವನಿ ಕೇಳಲು ಕಿವಿಗಳು ಯಾವಾಗಲು ಕಾತರಿಸುತ್ತಿದ್ದವು. ದಿನಾ ಅವಳನ್ನು ನೋಡುವುದೇ ನನ್ನ ಕಾಯಕವಾಯಿತು. ಒಂದೊಂದು ಸಲ ಅವಳೂ ನನ್ನೆಡೆಗೆ ಕಣ್ಣು ಹಾಯಿಸಿದಾಗ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾಳೆಂದು ಅನಿಸುತ್ತಿತ್ತು. ಅವಳ ಸೌಂದರ್ಯಕ್ಕೆ ಮೊದಲ ನೋಟದಲ್ಲೇ ಸೋತುಹೋಗಿದ್ದ ನಾನು ಒಂದು ದಿನ ಮನಸಲ್ಲಿನ ಭಾವನೆ ಹೇಳಿಯೇ ಬಿಡೋಣವೆಂದು ಧೃಢ ನಿರ್ಧಾರ ಮಾಡಿ, ಅಂಜಿಕೆ ಅಳುಕುಗಳನ್ನೆಲ್ಲಾ ತೆಗೆದು  ಹಾಕಿ ಆಂಟಿ ಮನೆ ಮುಂದೆ ಹೋಗಿ ನಿಂತಾಗ ದೊಡ್ಡ ಅಘಾತವೇ ಕಾದಿತ್ತು. ಆಕಾಶವೇ ಮೇಲೆ ಕಳಚಿ ಬಿತ್ತೇನೋ ಅನ್ನುವಂತೆ ಭಾಸವಾಯಿತು.
  
ಏಕೆಂದು ಕೇಳುತ್ತೀರಾ?
    
   ಕೈಯಲ್ಲಿ ಬ್ಯಾಗ್ ಹಿಡಿದು ಮನೆಯವರಿಗೆ ಟಾಟಾ, ಬೈ, ಟೇಕ್ ಕೇರ್ ಎನ್ನುತ್ತಿದ್ದಂತೆ ಅವರು ನುಸುನಗುತ್ತಾ ಕೈ ಮೇಲೆತ್ತಿ ಅಲುಗಾಡಿಸಿ ಬೈ, ಬೈ ರೇಖಾ ಚನ್ನಾಗಿ ಓದಿಕೊ ಎನ್ನುತ್ತಿದ್ದರು ಅವಳಿಂದ ಹೊರಡುವ ಟಾ-ಟಾ, ಬೈ-ಬೈ ಎನ್ನುವ ಶಬ್ದಗಳು ನನ್ನೆದೆಯಿಂದ ಈಟಿಯಂತೆ ಹಾದುಹೋಗುತ್ತಿದ್ದವು ನಾನಾಗ ಅಸಹಾಯಕ. ಯಾರಗೊಡವೆಗೆ ಹೊಗದೆ ಮನೆಯವರನ್ನು ರೇಗಿಸುತ್ತಾ  ಆನಂದದಿಂದ ಇದ್ದ ನನಗೆ  ನಾಲ್ಕು ದಿನಗಳು ಸ್ವರ್ಗದಂತೇನೊ ಎನಿಸಿದವು ನಂತರದ ಗೋಳು ನಡುಬಿಸಿಲಲ್ಲಿ ಕೆಂಪು ಚೇಳು ಕಡಿದಾಗ ಆಗುವಂತ ಯಾತನೆ. ಮಿಂಚಿನಂತೆ ಬಂದವಳು ಅದರಂತೆಯೇ ಬೇಗ ಮಾಯವಾದಳು. ಈಗ  ಆ ದಿನಗಳನ್ನು ಮರೆತ್ತಿದ್ದೇನೆ ಆದರೆ ಎಲ್ಲಿ ಹೋದರೂ ಅವಳೇ ಕಣ್ಮುಂದೆ ಬಂದಂತಾಗುತ್ತದೆ ಎಲ್ಲೋ ಒಂದು ಕಡೆ ಆ ಮಿಂಚು ಮತ್ತೆ ಕಣ್ಣಿಗೆ ಗೋಚರಿಸುವುದೇನೋ ಅನ್ನೋ ಸಣ್ಣ ಆಶಾಕಿರಣ ಸುಳಿದಾಡುತ್ತಿದೆ.

 ನಿಮ್ ಕಣ್ಣಿಗೆ ಬಿದ್ದರೆ ತಿಳಿಸುವಿರಾ.....?

Sunday, December 15, 2013

Published in vijaykarnataka lavalavike 3rd march 2014

ಪ್ರೇಮ ಪ್ರಪಾತಕ್ಕೆ ಸಿಲುಕುವ ಮುನ್ನ...!


            ಅದು ಸುಂದರ ಕನಸುಗಳಲ್ಲಿ ತೇಲಾಡುತ್ತಾ ಭವಿಷ್ಯ ಹೇಗಿರಬೇಕೆಂದು ದೊಡ್ಡವರನ್ನು ಅನುಸರಿಸಿ ಎಲ್ಲದ್ದಕ್ಕಿಂತ ಭಿನ್ನವಾಗಿ ಜೀವನ ರೂಪಿಸಿಕೊಳ್ಳುವ ಕನಸುಗಳಿಗೆ ಇಂಬು ನೀಡುತ್ತಾ ಇರುವ ವಯಸ್ಸು. ಇನ್ನು ಚಿಗುರು ಮೀಸೆ ಮೂಡಿಲ್ಲ ಇಷ್ಟಪಟ್ಟದನ್ನೆಲ್ಲಾ ತಂದುಕೊಡುವಲ್ಲಿ ಡ್ಯಾಡ್ ಎಂದು ಹಿಂದು ಮುಂದು ನೋಡಿಲ್ಲ. ಮಮ್ಮಿಯ ಬೈಗುಳಗೇನು ಕೊರತೆಯಿಲ್ಲ. ಅವ್ಯಾವು ಕಿವಿಗೆ ಬಿದ್ದರೂ ಗಾಳಿಗೆ ತೂರಿಕೊಂಡು ಹೋಗುತ್ತವೆ. ದಿನಾಲು ಫೊನ್ , ಫೇಸ್‍ಬುಕ್  ಚಾಟಿಂಗ್ ನಲ್ಲಿ ಮುಳುಗಿದ್ದು ಯಾರ ಅರಿವಿಗೇ ಬಂದಿಲ್ಲ. 

  ಅಷ್ಟರಲ್ಲೇ ಸುಂದರ ಕಂಗಳ ಪಟಪಟಾಂತ ಮಾತಾಡುವ, ಐಶ್ವರ್ಯಳಿಗೆ ಹಿಂದಿಕ್ಕುವಂತಹ ಬ್ಯುಟಿಫುಲ್ ಗೆಳತಿಯ ಪರಿಚಯ. ಇಂದಿನ ಹುಡುಗರ ಸ್ಪೀಡಿನ ರೇಂಜಿಗೆ ಪರಿಚಯ ಗಾಢ ಸ್ನೇಹವಾಗಲು ಸಮಯ ಹಿಡಿಯುವುದಿಲ್ಲ. ಸ್ವಲ್ಪ ದಿನಗಳಲ್ಲಿಯೇ ಪ್ರೇಮಕ್ಕೆ ತಿರುಗಿ ಫೀಲ್ಮು, ಗಾರ್ಡನ್ನು, ಪಾಪ್‍ಕಾರ್ನ್ ಸೆಂಟರ್ ಗಳಲ್ಲಿ ಅಲೆದಾಟ. ಮನೆಯಲ್ಲಿ ಸಾಲು ಸಾಲು ಸುಳ್ಳುಗಳ ಸರಮಾಲೆ ಹೆಣೆದು ಪ್ರೇಮಿಗಳ ಮಿಲನ. ಇಲ್ಲಿ ಯಾರ ಉಪದೇಶವು ತಲೆಗೆ ಹತ್ತದು, ತಮ್ಮದೇ ಲೋಕದಲ್ಲಿ ವಿಹಾರ  ನಡೆಸುತ್ತಾರೆ. ಚಿತ್ರ ವಿಚಿತ್ರವಾದ ನಡವಳಿಕೆ, ‘ಯಾರೊಂದಿಗೂ ಕಣ್ಣಲ್ಲಿ ಕಣ್ಣೀಟ್ಟು ಮಾತನಾಡುವುದೇ ಇಲ್ಲ, ಏನ್ ಮ್ಕಕಳೋ ಏನೋ”  ಎಂದು ಮೂಲೆಯಲ್ಲಿ ಕುಳಿತ ಅಜ್ಜಿಯ ಗುನುಗಾಟ ಯಾರ ಕಿವಿಗು ನಾಟುವುದೇ ಇಲ್ಲ. ಮುಂದೊಂದು ದಿನ...

  ಹೌದು, ನೀವಂದುಕೊಂಡಂತೆ ನವಪ್ರೇಮಿಗಳ ಪಲಾಯನ. ಇತ್ತ ತಂದೆ ತಾಯಿಯ ಹುಚ್ಚುಚ್ಚು ಅಲೆದಾಟ, ಕಂಡ ಕಂಡವರನ್ನು ನನ್ನ ಕೂಸಿನ (ಹೌದು ಎಷ್ಟು ದೊಡ್ಡವರೆಂದುಕೊಂಡರೂ ತಂದೆ ತಾಯಿಗೆ ಕೂಸೆ) ವಿಚಾರಣೆ, ಏನು ಮಾಡಲಾಗದೇ, ಉಪಾಯ  ತೋಚದೆ ವಿಚಿತ್ರ ಆಪತ್ತಿನಿಂದ ಹೊರಬರದೇ ಒದ್ದಾಡುವಿಕೆ. 

 ಮತ್ತೆ ಮನೆ ನೆನಪಿಗೆ ಬರುವುದು ಇದ್ದೆಲ್ಲಾ ದುಡ್ಡು ಖಾಲಿ ಆದಮೇಲೆನೆ. ಕಾಂಚನ  ಇರೋವರೆಗೂ ಮಜಾ ಮಾಡಿ ಇದ್ದೆಲ್ಲವನ್ನು ಕಳೆದು ಮತ್ತೆ ತಿರುಗಿ ಮನೆಯೇ ಗತಿ. ಓದು ಇಲ್ಲದೆ ಅತ್ತ ಜೀವನ ಇಲ್ಲದೆ ‘ಧೋಭಿಕಾ ಕುತ್ತಾ ನಾ ಘರ್‍ಕಾ ನಾ ಘಾಟ್‍ಕಾ’(ಅಗಸನ ನಾಯಿಯ ಪಾಡು ಮನೆಗೂ ದಕ್ಕಲ್ಲ ಕಾಡಿಗೂ ದಕ್ಕಲ್ಲ) ಅನ್ನುವಂತಾಗುತ್ತದೆ. ಇಂತಹ ಘಟನೆಗಳು ಸಿಕ್ಕಾಪಟ್ಟೆ ಕಾಣುತೇವೆ. 

ಇದಕ್ಕೆ ಪರಿಹಾರವಿಲ್ಲವೇ? 
* ಎಲ್ಲದಕ್ಕೂ ಒಂದು ಕಾಲ ಅಂತ ಇದೆ. ಆತುರಕ್ಕೆ ಬೀಳದೆ ಯಾವ ವಯಸ್ಸಿನಲ್ಲಿ  ಏನು ಮಾಡಬೇಕು ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ. 
* ಈ ವಯಸ್ಸಿನಲ್ಲಿ ಆಕರ್ಷಣೆ ಸಹಜ ಆದರೆ ತನ್ನ ಗುರಿ ತಲುಪಿದ ಮೇಲೆಯೇ ಪ್ರೀತಿ, ಪ್ರೇಮ ಮದುವೆ ವಿಚಾರ ಅಳವಡಿಸಿಕೊಳ್ಳಿ. 
*ಉತ್ತಮ ವ್ಯಕ್ತಿಗಳ ಜೀವನ ತಿಳಿದುಕೊಳ್ಳಿ ಅವರಂತೆ ದೊಡ್ಡ ಗುರಿಯನ್ನಿಟ್ಟುಕೊಳ್ಳಿ. 
* ಚಲನ ಚಿತ್ರಗಳ ಪ್ರಭಾವಕ್ಕೆ ಒಳಗಾಗದಿರಿ ಏಕೆಂದರೆ ರೀಲ್ ಲೈಫಿಗಿಂತ  ರಿಯಲ್ ಲೈಫು  ತುಂಬಾ ಭಿನ್ನ.
        
      ಮಕ್ಕಳ ಜೀವನ ರೂಪಿಸುವುದರಲ್ಲಿ ಪಾಲಕರ ಪಾತ್ರ ದೊಡ್ಡದು ಇದರಿಂದ ನಿಮ್ಮಲ್ಲೂ ಒಂದು ಸಣ್ಣ ಮನವಿ,
          ಪ್ಲೀಸ್.....,  ಪುತ್ರ/ಪುತ್ರಿಯ ಚಲನವಲನದ ಮೇಲೆ ಒಂದು ಕಣ್ಣಿಡಿ.

Saturday, December 7, 2013

                    ಮರೆಯದಿರಿ ನಮ್ಮತನ 

     ಅನುಕರಣೆಯ ಬೆಂಬಿದ್ದು  ಪಾಶ್ಚಿಮಾತ್ಯ ಜೀವನ ಶೈಲಿ ಅಳವಡಿಸಿಕೊಂಡು ನಾವೆಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆಂದು ಸೂಕ್ಷ್ಮವಾಗಿ ಅವಲೋಕಿಸಿದಾಗ ಅರ್ಥವಾಗುತ್ತದೆ. 
 ಅವರ ಉಡುಗೆ-ತೊಡುಗೆಯ ಅನುಕರಣೆಯಿಂದಾಗಿ ಅದೆಷ್ಟೋ ಸರಣಿ ಅತ್ಯಾಚಾರ ಪ್ರಕರಣಗಳು ಸೃಷ್ಟಿಯಾದವು . ಅವರ ಆಹಾರ ಪದ್ದತಿ ಅನುಸರಿಸಿ ಆರೋಗ್ಯವಂತರಾದ ನಾವು ಇಲ್ಲ ಸಲ್ಲದ ರೋಗಗಳನ್ನು ಬರಮಾಡಿಕೊಂಡೆವು. ವೈಭವದ ಜೀವನ, ಸುಖಲೋಲತೆಯ ದಾರಿ ಹಿಡಿದು ನಗರೀಕರಣದ ತೆಕ್ಕೆಯಲ್ಲಿ ಸಿಕ್ಕಿ ಹಾಕಿಕೊಂಡೆವು. ಇದರಿಂದ ಆರ್ಥಿಕ ಬೆಳವಣಿಗೆಯೇನೊ ಕಾಣಿಸಿತು, ಆದರೆ ಆನಂದಮಯ ಜೀವನಕ್ಕೆ ಬೇಕಾಗುವ ಶಾಂತಿ, ನೆಮ್ಮದಿ ಮತ್ತು ಪ್ರೀತಿಯನ್ನೇ ಕಳೆದುಕೊಂಡೆವು. ಮಕ್ಕಳ ಆರೈಕೆಯಲ್ಲಿ ಮೊಮ್ಮಕ್ಕಳನ್ನು ಆಡಿಸಿಕೊಂಡು ನೆಮ್ಮದಿಯಿಂದ ಕಾಲ ಕಳೆಯಬೇಕಿದ್ದ ವೃದ್ದ ಮಾತೃ-ಪಿತೃಗಳು ವೃದ್ದಾಶ್ರಮಗಳಲ್ಲಿ ಕಾಣತೊಡಗಿದರು. ನಾಯಿಕೊಡೆಯಂತೆ ಗಲ್ಲಿ ಗಲ್ಲಿಗೊಂದು ಶಿಶು ವಿಹಾರಗಳ ಸೃಷ್ಟಿಯಾಗಿ ತಂದೆ ತಾಯಿಗಳ ಪ್ರೀತಿ ಹೇಗಿರುತ್ತದೆ ಎಂಬುದನ್ನೇ ಮರೆಸಿದವು.
  ಒಂದು ಕಾಲದಲ್ಲಿ ಜಗತ್ತೇ ಕತ್ತು ತಿರುಗಿಸಿ ನೋಡುವಂತೆ ಮಾಡಿದ ನಮ್ಮ ವಿಶಿಷ್ಟ
ಸಂಸ್ಕೃತಿ ಮರೆತು ಅಂಧ ಅನುಕರಣೆ ಮಾಡಿ  ನಮ್ಮತನವನ್ನೇ ಕಳೆದುಕೊಂಡು ನಮ್ಮನ್ನು ನಾವೇ ಸಮಸ್ಯಾ ಕೂಪಕ್ಕೆ ತಳ್ಳುತ್ತಿದ್ದೇವೆ. ಆದ್ದರಿಂದಲೇ ಹಿರಿಯರು  ಹೇಳಿದ್ದಾರೆ ಬೆಳ್ಳಗಿರುವುದೆಲ್ಲಾ ಹಾಲಲ್ಲ ಅಂತ.

Tuesday, December 3, 2013

Published in nilume. Dec 22,2013

ಅದೆಷ್ಟು ಸುಂದರ ಹಾಸ್ಟೆಲ್ ಜೀವನ

by ನಿಲುಮೆ
- ತುಳಜಪ್ಪ ಬುಧೇರ
ಹಾಸ್ಟೆಲ್ ಜೀವನ
       ಹಾಸ್ಟೆಲ್ ಹುಡಗ್ರೆಲ್ಲಾ ಕೆಟ್ಟವರು, ಟಪೋರಿಗಳು ಯಾವಾಗಲೂ ಹುಡುಗಿಯರ ಹಿಂದೆಯೇ ಸುತ್ತುತ್ತಿರುತ್ತಾರೆ. ಅವರಲ್ಲಿ ಜೀವನ ಸುಧಾರಿಸಿಕೊಳ್ಳಬೇಕೆಂಬುದರ ಬಗ್ಗೆ ಸಿರಿಯಸ್‍ನೆಸ್ಸೇ ಇರಲ್ಲಾ, ಅನ್ನೋ ಮಾತುಗಳು ಆಗಾಗ ಕೇಳುತ್ತಿರುತ್ತೇವೆ. ತಂದೆ ತಾಯಂದಿರಂತೂ ತಮ್ಮ ಮಕ್ಕಳಿಗೆ ಹಾಸ್ಟೆಲ್ ಹುಡುಗರ ಸಹವಾಸ ಮಾಡಬೇಡ ಎಂಬ ಸ್ಟ್ರಿಕ್ಟ್ ಆದೇಶ ಮಾಡಿರುವುದನ್ನು ನೋಡಿರುತ್ತೇವೆ. ಇದೇ ಪಾಠವನ್ನು ಚಿಕ್ಕವನಿದ್ದಾಗ ನನ್ನ ಗೆಳೆಯ ಮಾಡಿದ್ದ. ಅವನಿಗೆ ಯಾರು ಹೇಳಿದ್ದರೋ ಅವನೇ ಬಲ್ಲ.
ಪಕ್ಕದೂರಾದ ಮನ್ನಳ್ಳಿಯಲ್ಲಿ ಹೈಸ್ಕೂಲ್ ಇದ್ದಿದ್ದರಿಂದ ಪ್ರೌಢ ಶಿಕ್ಷಣ ಯಾವುದೇ ಚಿಂತೆಯಿಲ್ಲದೇ ಆರಾಮಾಗಿ ಮುಗಿಯಿತು. ಮುಂದೆ ಕಾಲೇಜ್‍ಗೆ ಸೇರಲೇಬೇಕಲ್ಲವೆ, ಬೀದರಿನ ಪ್ರತಿಷ್ಠಿತ ಸಂಸ್ಥೆಯಲ್ಲಿ ಪ್ರವೇಶ ಪಡೆದಾಯಿತು. ದಿನಾಲು ಹೋಗಿ ಬರಬೇಕೆಂದರೆ ನಮ್ಮೂರಿಗೆ ಸರಿಯಾಗಿ ಬಸ್ಸುಗಳೇ ಇಲ್ಲ. ಇದ್ದರೂ ಅಮಾಸೆಗೋ ಹುಣ್ಣಿಮೆಗೋ ಎಂಬಂತೆ ಅಪರೂಪ. ಸಮಯದ ಪಾಲನೆಯಂತು ಅವರಪ್ಪನಾಣೆಗೂ ಇಲ್ಲವೇ ಇಲ್ಲ. ಹೀಗಾಗಿ ಕಾಲೇಗೆ ಹೋಗಿ ಬರೋದೆ ಒಂದ್ ದೊಡ್ಡ ಸಮಸ್ಯೆಯಾಯಿತು. ಆಗ ಅಪ್ಪನ ತಲೆಯಲ್ಲಿ ಬಂದ ಐಡಿಯಾನೆ ಹಾಸ್ಟೆಲ್. ಈ ಶಬ್ದ ಕಿವಿಗೆ ಬಿದ್ದೊಡನೆ ಕಾಲಿನಿಂದ ತಲೆಯವರೆಗೂ ಜುಮ್ ಎಂದು ರಕ್ತ ಸಂಚಾರವೇ ನಿಂತಂತಾಗಿ ನಿಸ್ತೇಜನಾಗಿ ನಿಂತಲ್ಲೇ ಕುಸಿದು ಬಿಟ್ಟೆ. ಆದರೆ ಅನ್ಯ ಮಾರ್ಗವೇ ಇರಲಿಲ್ಲ. ಅಲ್ಲಿಗೆ ಹೋಗಲೇಬೇಕಾಯಿತು.
ಎರಡು ದಿನ ಅಂಜುತ್ತಾ ಅಳುಕುತ್ತಲೆ ಕಾಲ ಕಳೆದ ನನಗೆ ಮೊದಲ ಅಚ್ಚರಿ ಎಂಬಂತೆ  ಒಂದು ದಿನ ಸಾಂಯಂಕಾಲ ಪುಸ್ತಕ ಹಿಡಿದು ಮೇಸ್ಟ್ರು ಹೇಳಿದ್ದೆಲ್ಲಾ ರಿವಿಶ್ಯನ್ ಮಾಡ್ತಾ ಇದ್ದೆ ಇಬ್ರು ಅಪರಿಚಿತ ಹುಡುಗರು ನಾನಿದ್ದ ಕೋಣೆಗೆ ನುಗ್ಗಿ “ಒಬ್ ಮುತ್ಯಾ(ತಾತ) ಭಾಳ್ ಕಷ್ಟದಾಗ್ ಹನಾ ಅವ್ನಿಗ್ ಹೆಲ್ಪ್ ಮಾಡ್ಬೇಕ್ ಎಸ್ಟಾರ್ ರೊಕ್ಕ ಕೊಡು” ಅಂದಾಗ ಏನು ತೋಚದೆ ಗೋಡೆಗೆ ಜೋತು ಹಾಕಿದ ಅಂಗಿಯ ಕಿಸೆಯಲ್ಲಿದ್ದ ಇಪ್ಪತ್ತು ರುಪಾಯಿ ತೆಗೆದುಕೊಟ್ಟೆ. ಏನೆಂದು ಕೇಳುವಷ್ಟರಲ್ಲಿ ಹೊರಟು ಹೋದರು. ಕುತೂಹಲ ತಾಳದೆ ಕೋಣೆಯಿಂದ ಹೊರಬಂದೆ ಮೇನ್ ಗೇಟ್‍ಗೆ ಬೆನ್ನು ತಾಕಿಸಿ ವಯಸ್ಸಾದ ಮುದುಕ ಕುಳಿತಿದ್ದಾನೆ. ಮುಖವೆಲ್ಲಾ ಬಾಡಿದೆ ನೋಡಿದ ತಕ್ಷಣವೇ ಎರಡು ದಿನಗಳಿಂದ ಊಟ ಮಾಡಿಲ್ಲವೆಂದು ಸುಲಭವಾಗಿ ಅಂದಾಜಾಗುತ್ತಿತ್ತು. ಇದನ್ನೇ ಗಮನಿಸುತ್ತಿರಬೇಕಾದರೆ ಆ ಹುಡುಗರು ಬಂದು ಅವನ ಕೈಯಲ್ಲಿ ಜಮಾಯಿಸಿದ ದುಡ್ಡೆಲ್ಲಾ ಇಟ್ಟರು ಒಂದು ರೂಮಿಗೊಯ್ದು ಊಟ ಮಾಡಿಸಬೇಕೆಂದು ತಟ್ಟೆ ಕೈಗಿತ್ತಾಗ “ನೌಜವಾನ್ ಮಗ ದವಾಖಾನ್ಯಾಗ್ ಹನ ಇದು ಗಂಟಲ್ನಾಗ್ ಹ್ಯಾಂಗ ಇಳಿತದ್ ಮಗಾ” ಎಂದಾಗ ನಮ್ಮೆಲ್ಲರ ಕಣ್ಣಲ್ಲಿ ಸಳ್ ಅಂತ ನೀರು ಜಾರಿತು. ದೇವ್ರು ನಿಮಗ್ ಒಳ್ಳೆದ್ ಮಾಡ್ಲಿ ಅಂತ ಹೊರನಡೆದ.
ಅಲ್ಲೇ ನಿಂತಿದ್ದ ಒಬ್ಬ ಹುಡುಗ ಅವನ ಕುರಿತು ತಾನಾಗಿಯೇ ಹೇಳಲು ಆರಂಭಿಸಿದ.. ತುಂಬಾ ಬಡತನ. ಕೆಲಸ ಮಾಡದೆ ಮನೆಯಲ್ಲಿ ಒಲೆ ಉರಿಯುವುದಿಲ್ಲ. ಅಷ್ಟಿದ್ದರೂ ತುಂಬಾ ಸಂತೋಷದಿಂದ ಇದ್ದ ಕುಟುಂಬಕ್ಕೆ ಗ್ರಹಣ ಹಿಡಿದಂತಾಯಿತು. ಇದ್ದ ಒಬ್ಬ ಮಗ ಆಸ್ಟತ್ರೆ ಸೇರಿದ್ದಾನೆ. ಬಹಳ ದಿನಗಳಿಂದ ಹೊಟ್ಟೆ ನೋವು ಎನ್ನುತ್ತಿದ್ದವನಿಗೆ ಅಲ್ಲಿನ ಆರ್‍ಎಂಪಿ ಡಾಕ್ಟರುಗಳಿಂದಲೇ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಒಂದು ದಿನ ಎಕಾಎಕಿ ವಿಪರೀತ ಹೊಟ್ಟೆನೋವಿನಿಂದ ಹೊರಳಾಡುತ್ತಿದ್ದಾಗ ಎಂದಿನಂತೆ ಅಲ್ಲಿನ ಡಾಕ್ಟ್ರುಗಳಿಗೆ ತೋರಿಸಿದಾಗ ಅವರು ನಮ್ಮಿಂದಾಗದು ಎಂದು ಕೈ ಚಲ್ಲಿದರು. ಆಗ ಬೇರೆ ದಾರಿ ತೋಚದೆ ಬೀದರ್‍ನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದೆ ಐವತ್ತು ಸಾವಿರ ಖರ್ಚಾಗುತ್ತೆ ಎಂಬ ಡಾಕ್ಟರ್‍ನ ಮಾತುಗಳನ್ನು ಕೇಳಿ ದಂಗಾಗಿ ರೋಡ್ ಮೇಲೆ ನಿಂತಿದ್ದಾಗ, ನಮ್ಮ ಯಾರೋ ಹುಡುಗನ ಕಣ್ಣಿಗೆ ಬಿದ್ದು ಇಲ್ಲಿಗೆ ಬಂದಿದ್ದಾರೆ ಎಂದು ಮಾತು ಮುಗಿಸುತ್ತಿದ್ದಂತೆ ನನ್ನ ತಲೆಯಲ್ಲಿ ತುಂಬಿದ್ದ ಹಾಸ್ಟೆಲ್ ಕುರಿತಾದ ಇಲ್ಲಸಲ್ಲದ ತಪ್ಪು ಕಲ್ಪನೆಗಳೆಲ್ಲಾ ಸರ್ರಂತ ಇಳಿದು ಹೋದವು. ಎಲ್ಲರ ಜೊತೆ ಬೆರೆಯಲು ಆರಂಭಿಸಿದೆ. ಪರಿಣಾಮ ಅಲ್ಲಿನ ಎಲ್ಲಾ ಕೋಣೆಯ ಹುಡುಗರೆಲ್ಲಾ ಗೆಳೆಯರಾದರು. ನಮ್ಮಲ್ಲಿ ಯಾರೇ ಆಗಲಿ ತೊಂದರೆಯಲ್ಲಿದ್ದರೆ ಅದು ಎಲ್ಲರ ಸಮಸ್ಯೆಯೆಂಬಂತೆ ವರ್ತಿಸುತ್ತಿದ್ದದ್ದು ನೋಡಿ ವಿಚಿತ್ರ ಖುಷಿಯೊಂದು ಮನಸ್ಸಲ್ಲಿ ಉಯ್ಯಾಲೆ ಆಡಿದಂತಾಗುತ್ತಿತ್ತು.
ಸೂರ್ಯ ಉದಯವಾಗುವುದೇ ತಡ ಎಲ್ಲಿಂದಲೋ ಜೋರಾಗಿ ಸುಂದರ ಕಂಠದ ಡಾ.ರಾಜ್‍ಕುಮಾರರ ಹಾಡೊಂದು ಕಿವಿಗೆ ಇಂಪು ಕೊಡುತ್ತದೆ. ಈ ಹಾಡಿನಿಂದ ಎಚ್ಚರಗೊಂಡು ಅದೇ ಹಾಡನ್ನು ನನಗರಿವಿಲ್ಲದೆ ಗುನುಗುತ್ತಾ ಸೂರ್ಯನಿಗೆ ಮೈ ಕಾಸಲು ಹೊರಗಡೆ ಬಂದಾಗ ಆಟವಾಡುತ್ತಿದ್ದವರನ್ನು ನೋಡಿ ನಾನು ಅದರಲ್ಲಿ ಸೇರಿಕೊಳ್ಳುತೇನೆ.
ಕೋಣೆಗೊಂದು ಲವ್ ಸ್ಟೋರಿಗಳು ಸಿಗುವ ಇಲ್ಲಿ ಒಂದೊಂದು ಗೋಡೆ ಒಂದೊಂದು ಸುಂದರ ಕಥೆಗಳನ್ನು ಹೇಳುತ್ತದೆ. ಓದುವುದಕ್ಕೆ, ಮಲಗುವುದಕ್ಕೆ ಫಿಕ್ಸ್ ಟೈಮ್ ಅಂತ ಹೇಳೋಕ್ಕಾಗಲ್ಲ ಯಾವಾಗ ಮೂಡ್ ಬರುತ್ತೋ ಆಗ ಪುಸ್ತಕ ಹಿಡಿಯೋದು, ಎಲ್ಲಾ ಗೆಳೆಯರು ಸೇರಿ ಒಂದೇ ತಾಟಿನಲ್ಲಿ ಊಟ ಮಾಡೊದು, ವಾರಕ್ಕೊಂದು ಸಾರಿ ಸಿಟಿಯೆಲ್ಲಾ ಸುತ್ತಾಡೋದು ಎಕ್ಸಾಂ ಹತ್ತಿರ ಬಂದರಂತು ಎಲ್ಲಾ ಸೈಲೆಂಟ್, ಎಲ್ಲ ರೂಮಿನವರು ತತ್ವಜ್ಞಾನಿಗಳಾಗುತ್ತಾರೆ.
ಯಾರ ಸ್ವಾತಂತ್ರ್ಯಕ್ಕು ಲಗಾಮಿಲ್ಲ. ಅವರವರ ಇಚ್ಚೆಯಂತೆ ಇರುತ್ತಾರೆ. ಹಾಗಂತ ಯಾವಾಗಲು ಟೈಂಪಾಸ್ ಮಾಡ್ತಾನೆ ಇರ್ತಾರೆ ಅಂತಲ್ಲ. ಆಡುತ್ತಾ, ಹಾಡುತ್ತಾ, ಓದುತ್ತಾ ಒಟ್ಟಿನಲ್ಲಿ ಮಜಾ ಮಾಡ್ತಾ ಆನಂದಮಯ ಸ್ವತಂತ್ರ್ಯ, ಸ್ವಾರಸ್ಯ ಜೀವನದ
ಹಾಸ್ಟೆಲ್ ಮಜಾ ಅನುಭವಿಸಿದವನೇ ಬಲ್ಲ…..