Friday, February 27, 2015

ಅನೇಕರಲ್ಲಿ ಜೀವನದಲ್ಲಿ ಏನಾದರೊಂದು ಮಹಾನ್ ಸಾಧನೆ ಮಾಡಬೇಕು ಅಂತ ಆಲೋಚನೆ ಇರುತ್ತೆ. ಅದಕ್ಕಾಗಿ ಗಂಭೀರ ಪ್ರಯತ್ನವೂ ನಡೆಯುತ್ತೆ. ಆದ್ರೆ ಕೆಲವೊಮ್ಮೆ ಚಿಕ್ಕ ಪುಟ್ಟ ಸಮಸ್ಯೆಗಳೂ ಹಿಂದೆ ಸರಿಯುವಂತೆ ಮಾಡುತ್ತವೆ. ಅಂತಹದ್ದೇನಾದರೂ ಅನುಭವ ಆದ್ರೆ... ಇಲ್ಲಿ ಕ್ಲಿಕ್ ಮಾಡಿ ... ಸಂಪೂರ್ಣ ಚಿತ್ರ ನೋಡಿ. 

Saturday, February 14, 2015


  • ಪದ್ಮನಾಭ ದೇವಸ್ಥಾನದ 266 ಕೇಜಿ ಚಿನ್ನ ಗಾಯಬ್...
  • ಚಿನ್ನ ಶುದ್ಧೀಕರಿಸಲು ಒಯ್ದಷ್ಟು ಚಿನ್ನ ವಾಪಸ್ಸು ಬರಲೇ ಇಲ್ಲ..

ತಿರುವನಂತಪುರಮ್ನಲ್ಲಿರೋ ಪದ್ಮನಾಭ ಸ್ವಾಮಿ ದೇವಾಲಯದಿಂದ 266 ಕೆಜಿ ಚಿನ್ನ ನಾಪತ್ತೆಯಾಗಿದೆ. ದೇವಾಲಯದಲ್ಲಿರುವ 893 ಕೆಜಿ ಚಿನ್ನ ಶುದ್ಧೀಕರಿಸಲು ಖಾಸಗಿ ಗುತ್ತಿಗೆದಾರನಿಗೆ ನೀಡಲಾಗಿತ್ತು. ಆದ್ರೆ ಮರಳಿ ವಾಪಸ್ಸು ಬಂದಿದ್ದು ಮಾತ್ರ 637 ಕೆಜಿ ಚಿನ್ನ ಮಾತ್ರ. ಕೇಂದ್ರದ ಮಾಜಿ ಆಡಿಟರ್ ಜನರಲ್ ಈ ಕುರಿತು ಸುಪ್ರೀಂ ಕೋರ್ಟಿಗೆ ಈ ಕುರಿತು ಮಾಹಿತಿ ನೀಡಿದ್ದಾರೆ.. ಇಲ್ಲೊಂದು ದೊಡ್ಡ ಗೋಲ್ಮಾಲ್ ನಡೆದಿದೆ ಅನ್ನೋದು ಮಾತ್ರ ಮೇಲ್ನೋಟದಿಂದಲೇ ತಿಳಿಯುತ್ತೆ. ಹಾಗಾಗಿ ಆದಷ್ಟು ಬೇಗ ಪತ್ತೆ ಮಾಡಬೇಕಾಗಿದೆ.

Thursday, June 12, 2014

ಓ ಹಾಡು ನಿನ್ನಿಂದ ಈ ಪಾಡು...!

                                                   published 15th may 2014 in sakhi magzine

   
    ಅವು ಚುನಾವಣಾ ದಿನಗಳು, ಅಬ್ಬರದ ಸಮಾವೇಶಗಳು, ಒಬ್ಬರು ಇನ್ನೊಬ್ಬರಿಗೆ ಬಯ್ಯುವುದು, ಹೀಯಾಳಿಸುವುದು, ಬಣ್ಣ ಬಣ್ಣದ ಮಾತುಗಳನ್ನಾಡುತ್ತಾ ಜನರನ್ನು ಫುಸಲಾಯಿಸಲು ನಾನಾ ರೂಪ ಧರಿಸುವ ರಾಜಕಾರಣಿಗಳು. ಎಲ್ಲಿ ಹೋದರೂ ಚುನಾನಣೆಯ ಮಾತುಗಳೇ ಕೇಳುತ್ತಾ ತಲೆ ಚಿಟ್ಟು  ಹಿಡಿದಿತ್ತು ಇದರಿಂದ ತಪ್ಪಿಸಿಕೊಳ್ಳಲೆಂದು ಊರಿಗೆ ಹೋಗಿದ್ದೆ. ಅದು ಸಾಯಂಕಾಲದ ವೇಳೆ ಮನೆಯಲ್ಲಿದ್ದವರೆಲ್ಲಾ ಮದುವೆಗೆಂದು ನೆಂಟರಲ್ಲಿಗೆ ಹೋಗಿದ್ದಾರೆ. ದಿನಾಲು ಗೆಳೆಯರ ಜೊತೆ ಇರುತ್ತಿದ್ದ ನಾನು ಅಂದು ಏಕಾಂಗಿಯಾಗಿ ಬಂಧಿಸಲ್ಪಟ್ಟ ಕೈದಿಯಂತಾದೆ. ಆ ಸ್ಥಿತಿಯಲ್ಲಿ ಉಪವಾಸವಿದ್ದರೂ ಚಿಂತೆಯಿಲ್ಲ ಒಬ್ಬಂಟಿಗನಾಗಿರಬಾರದು ಎನಿಸುತ್ತಿತ್ತು.
  ಪ್ರತಿದಿನ ಚಿಕ್ಕ ಚಿಕ್ಕ ಮಕ್ಕಳಿಂದ ತುಂಬಿ ಗಿಜಗಿಡುತ್ತಿದ್ದ ಮನೆ ಮುಂದಿನ ಕಟ್ಟೆ ಯಾರಿಲ್ಲದೇ ಬೀಕೊ ಎನ್ನುತಿತ್ತು, ಯಾವ ಗೆಳೆಯರ ಪತ್ತೆಯೂ ಇಲ್ಲ. ಅನ್ಯ ಮಾರ್ಗವಿಲ್ಲದೆ ಟಿ.ವಿ.ಮುಂದೆ ಕುಳಿತುಕೊಳ್ಳಲೇ ಬೇಕಾಯಿತು. ಯಾವ ಸುದ್ದಿ ವಾಹಿನಿ ತೆಗೆದರೂ ರಾರಾಜಿಸುವ ರಾಜಕೀಯ ಸುದ್ದಿಗಳು, ಬೇಸರವಾಗಿ, ಸಂಗೀತದ ಗಾಳಿ ಗಂಧವೂ ತಿಳಿಯದಿದ್ದರೂ ಸಿನೆಮಾ ಹಾಡುಗಳೆಂದರೆ ಪ್ರಾಣವೆಂಬಂತೆ ಆಲಿಸುವ ನಾನು ಯು2 ಚಾನಲ್‍ನ ಸಂಖ್ಯೆಯನ್ನು ಅದುಮಿದ್ದೇ ತಡ ಒಂದಕ್ಕಿಂತ ಒಂದು ಭಿನ್ನವಾದ ಹಾಡುಗಳು.
  ಪರದೆಯಲ್ಲಿನ ನಟನಿಗೆ ಅನುಸರಿಸುತ್ತಾ ಅವನಿಗಿಂತ ಜೋರಾಗಿ ಹಾಡತೊಡಗಿದೆ. ಕೈಕಾಲುಗಳು ತಾನಾಗಿಯೆ ಕುಣಿಯಲು ಆರಂಭಿಸಿದವು. ಉತ್ತಮ ಕೆಲಸಕ್ಕೆ ಹಲವಾರು ವಿಘ್ನಗಳು ಎಂಬಂತೆ ಇದ್ದಕಿದ್ದಂತೆ ಕರೆಂಟ್ ಕಟ್ಟಾಗಿ ಟಿ.ವಿ ಹಾಡುವುದನ್ನು ನಿಲ್ಲಿಸಿತು, ನನ್ನ ಹಾಡು ಮಾತ್ರ ನಡೆಯುತ್ತಲೇ  ಇತ್ತು. ಆ ಹಾಡುಗಳಲ್ಲಿ ಮಗ್ನನಾದ ನಾನು ಕರ್ಕಶ ದ್ವನಿಯಲ್ಲಿ ಗಟ್ಟಿಯಾಗಿ “ಯಾರೊ ಈ ಭೂಮಿಗೆ ಪ್ರೀತಿಯಾ ತಂದರು” ಎಂದು ಅರಚುತ್ತಾ ಮನೆ ಮುಂದಿರುವ ರಸ್ಥೆಗೆ ಬಂದು ಬಿಟ್ಟೆ. ಸಮಯ ಕಳೆದಂತೆಲ್ಲ ವ್ಯಾಲ್ಯೂಮ್ ಹೆಚ್ಚುತ್ತಲೇ ಇತ್ತು. ನನ್ನದೇ ಲೋಕದಲ್ಲಿ ತೇಲಾಡುತ್ತಿರುವಾಗ ಕಣ್ಮುಂದೆ ಏನೋ ಹಾದು ಹೋದಂತಾಗಿ ಎಚ್ಚರಗೊಂಡು ಕಣ್ಬಿಟ್ಟು ಕತ್ತು ತಿರುಗಿಸಿ ಅತ್ತಿತ್ತ ನೋಡಿದಾಗ ಓಣಿಯ ಮಹಿಳೆಯರೆಲ್ಲರೂ ಸುತ್ತುರಿದು ನಿಂತಿದ್ದಾರೆ. ಪ್ರತಿಯೊಂದು ಮುಖವು ಮುಸು ಮುಸು ನಗು ಸೂಸುತ್ತಿದೆ.
    ವಾವ್..! ನನ್ನ ಹಾಡಿಗೂ ಅಭಿಮಾನಿಗಳಾ? ಅಂದು ಕೊಚ್ಚಿಕೊಳ್ಳುವ ಹಾಗಿರಲಿಲ್ಲ. ಯಾಕೆ  ಇಷ್ಟೊಂದು ಜನ ಸೇರಿದ್ದೀರಿ ಅಂದು ಪ್ರಶ್ನಿಸುವ ಹಾಗೂ ಇರಲಿಲ್ಲ. ಅಲ್ಲಿಯವರೆಗೂ ನನ್ನ ಕಂಠದಿಂದ ಹೊರಬಂದ ಜೋರಾದ ದ್ವನಿ ಎಂದೂ ಕೇಳಿರಲಿಲ್ಲ. ಕಠೋರವಾದ ದ್ವನಿ ಕಿವಿಗೆ ಬಿದ್ದೊಡನೆ ಎಲ್ಲಿ ಏನಾಯಿತೊ ಎಂದುಕೊಂಡು ನಾನಿದ್ದಲ್ಲಿಗೆ ಧಾವಿಸಿದರಂತೆ. ನಗುವವರ ಮುಂದೆ ಹಲ್ಲು ಕಿರಿದು ನಾಲಿಗೆ ಕಚ್ಚಿ ಮುಖ ಅವುಚಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಹಾಡುವುದು ನನ್ನಿಷ್ಟ, ಮನಬಂದಂತೆ ಹಾಡುತ್ತೇನೆ ಅಂದುಕೊಳ್ಳುವುದು ತಪ್ಪೆಂದು ಎನಿಸತೊಡಗಿತು. ಎಲ್ಲಾದರೂ ಹಾಡು ಕೇಳಿ ಅದನ್ನು ಗುನುಗುವಾಗಲೆಲ್ಲ ಈ ಘಟನೆ ನೆನಪಾಗಿ ನಗು ಉಕ್ಕುತ್ತದೆ.

Wednesday, January 22, 2014


ಡಬ್ಬಿಂಗ್ ಭೂತ ಇನ್ನೆಷ್ಟು ದಿನ ?

ಮೊಂಡು ವಾದ ಬಿಟ್ಟು ಕನ್ನಡಿಗರಿಗೆ ಏನು ಬೇಕು ಕೇಳುವಿರಾ?

    ಡಬ್ಬಿಂಗ್ ಬಗ್ಗೆ ಎದ್ದಿರುವ ಗೊಂದಲದಿಂದ ಜನತೆ ತುಂಬಾ ಬೇಸರಗೊಂಡಿದ್ದಾರೆ ಹಲವಾರು ವರ್ಷಗಳಿಂದ ನಡೆಯುತ್ತಿರುವ ಈ ವಿವಾದಕ್ಕೆ ತೆರೆ ಕಾಣುವ ಯಾವುದೇ ¯ಕ್ಷಣಗಳು ಕಾಣುತ್ತಿಲ್ಲ. ಡಬ್ಬಿಂಗ್ ಬೇಡವೇ ಬೇಡ ಇದರಿಂದ ಕನ್ನಡ ಭಾಷೆ ಮತ್ತು ಚಿತ್ರರಂಗಕ್ಕೆ ದೊಡ್ಡ ಅಘಾತ ಉಂಟಾಗುತ್ತದೆ ಎಂದು ಹೇಳಿಕೊಂಡು ಡಬ್ಬಿಂಗ್ ವಿರೋಧಿಸುವವರು ನಿಜವಾಗಲೂ ಕನ್ನಡ ಬೆಳೆಸುವ ಮನೋಭಾವನೆ ಉಳ್ಳವರಾಗಿದ್ದರೆ ಇಂತಹ ಮೊಂಡು ವಾದಕ್ಕೆ ಪಟ್ಟು ಹಿಡಿಯುತ್ತಿರಲಿಲ್ಲ. ಇಲ್ಲಿ ಆಗುವ ನಷ್ಟ ಕನ್ನಡಿಗರಿಗೋ ಅಥವ ನಿರ್ಮಾಪಕರಿಗೋ ತಿಳಿಯುತ್ತಿಲ್ಲ. ಊಟ ಮಾಡಬೇಕೆಂದು ಕುಳಿತ ವ್ಯಕ್ತಿ ಯಾವುದು ರುಚಿಕಟ್ಟಾಗಿರುವುದೋ ಅದನ್ನು ಮಾತ್ರ ಸ್ವೀಕರಿಸುವುದು ಸ್ವಭಾವ ಅದು ಆತನ ಹಕ್ಕು ಕೂಡ. ಯಾರು ವಿರೋಧಿಸುವ ಪ್ರಸಂಗ ಬಾರದು ಆದರೆ ಒಂದು ಅರ್ಥ ಆಗುತ್ತಿಲ್ಲ ಒತ್ತಾಯ ಪೂರ್ವಕವಾಗಿ ನಾವು ಮಾಡಿದ್ದನೇ ಸ್ವೀಕರಿಸಿ ಎಂದು ಒಪ್ಪಿಸಲು ಪ್ರಯತ್ನಿಸುತ್ತಿರುವಂತಿದೆ ಇವರ ಲೆಕ್ಕಾಚಾರ. ಚಲನಚಿತ್ರಗಳಿರುವುದು ಮನೋರಂಜನೆಗಾಗಿ ನೋಡುಗ ಇಲ್ಲಿ ದುಡ್ಡು ವ್ಯಯ ಮಾಡುವುದರಿಂದ ಹೆಚ್ಚು ಚೆನ್ನಾಗಿರುವುದನ್ನು ನೋಡಬೇಕೆಂಬ ಹಂಬಲವುಳ್ಳವನಾಗಿರುತ್ತಾನೆ ಇಲ್ಲಿ ಅವನಿಗೆ ಒತ್ತಾಯ ಮಾಡಿದರೆ ಅದು ಮೂಲಭೂತ ಹಕ್ಕಿಗೆ ವಿರೋಧಿಸಿದಂತೆಯೇ ಸರಿ. ಕನ್ನಡ ಚಿತ್ರಗಳನ್ನು ಕನ್ನಡಿಗರೇ ಹೆಚ್ಚಾಗಿ ನೋಡಬೇಕು ಎಂದು ಬಯಸುವ ನೀವು ಈ ವೀಕ್ಷಕರÀ ಭಾವನೆಗಳಿಗೆ ಕಿಂಚಿತ್ತಾದರೂ ಬೆಲೆ ಬೇಡವೇ?
ಇಲ್ಲಿ ನಿಮ್ಮಷ್ಟಕ್ಕೆ ನೀವು ನಿರ್ಧಾರ ತೆಗೆದುಕೊಂಡರೆ ಇದು ನಿರಂಕುಶತ್ವದ ಪರಮಾವಧಿ ಎನ್ನದೆ ಮತ್ತೇನು ಅಲ್ಲ. 

  ಒಂದು ದಿನ ಎಂಟು ವರ್ಷದ ಹುಡುಗ ಸ್ಪೈಡರ್ ಮ್ಯಾನ್ ಚಿತ್ರ ವೀಕ್ಷಿಸುತ್ತಾ ಕುಳಿತಿದ್ದ ನನಗೆ ಆಶ್ಚರ್ಯವೋ ಆಶ್ವರ್ಯ ಏಕೆಂದರೆ ಅವನಿಗೆ ಇಂಗ್ಲಿಷ್ ಭಾಷೆಯ ಜ್ಞಾನವೇ ಇಲ್ಲ ಕುತೂಹಲದಿಂದ ಕನ್ನಡವನ್ನು ಬಿಟ್ಟು ಅರ್ಥವಾಗದ ಇಂಗ್ಲಿಷ್ ಚಿತ್ರ ಯಾಕ್ಷೆ ವೀಕ್ಷಿಸುತ್ತಿದ್ದೀಯಾ ಎಂದು ಕೇಳಿದರೆ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳೆಲ್ಲರು ಅದರ ಬಗ್ಗೆ ಮಾತಾಡುತ್ತಿದ್ದರು ತುಂಬಾ ಚನ್ನಾಗಿದೆಯಂತೆ ಅದಕ್ಕೆ ನೋಡ್ತಾ ಇದೀನಿ ಎಂದ. ಎಷ್ಟು ಬೇಸರದ ಸಂಗತಿ ಅಲ್ಲವೇ? ಕೇವಲ ಕನ್ನಡ ಭಾಷೆಯನ್ನು ಅವಲಂಬಿಸಿದವನಿಗೆ ಯಾವುದೇ ವಿಷಯದ ಬಗ್ಗೆ ಪರಿಪೂರ್ಣ ಜ್ಞಾನ ಸಿಗಲ್ಲ ಎಂದು ಮನದಟ್ಟು ಮಾಡಲು ಪ್ರೇರೇಪಿಸಿದಂತಾಗುತ್ತಿದೆ. ಒಂದು ವೇಳೆ ಅದೇ ಸಿನಿಮಾ ಕನ್ನಡದಲ್ಲಿ ನೋಡಿದರೆ ಅದರಲ್ಲಿನ ಸಂಪೂರ್ಣ ವಿಷಯವಸ್ತು ತಿಳಿಯಲು ಸಾಧ್ಯವಾಗುತ್ತಿರಲಿಲ್ಲವೇ? ಇಲ್ಲಿ ಕನ್ನಡ ಭಾಷೆಯ ಕುರಿತು ಪ್ರೀತಿಯ ಭಾವನೆ ತಾನಾಗಿಯೇ ಬೆಳೆಯುತ್ತಿತ್ತು. ಅದರಲ್ಲಿ ಕನ್ನಡ ಅಳಿಯುವ ಮಾತು ಎಲ್ಲಿಂದ ಬಂತು? ಇದೇ ರೀತಿ ಮುಂದುವರಿದರೆ ಮುಂದೆ ಕನ್ನಡ ಭಾಷೆ ಮೂಲೆಗುಂಪಾಗುವ ಆತಂಕ ಸೃಷ್ಟಿಯಾದಿತು!

   ಡಬ್ಬಿಂಗ್ ವಿರೋಧಿಸಿ ಬಂದ್ ಘೋಷಣೆ ಮಾಡಲು ನಿರ್ಧರಿಸಿರುವ ಮಹಾ ಮಹೀಮರುಗಳು ಕನ್ನಡಿಗರಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಲಿ.
      
  • ನಿರ್ಮಾಪಕ, ನಿರ್ದೇಶಕರ ಕಾಳಜಿಯನ್ನು ಬಿಟ್ಟು ವೀಕ್ಷಕರಿಗೆ ಏನು ಬೇಕು ಎಂದು ಆಲೋಚಿಸುವುದು ಬೇಡವೇ? 
  • ಇಂದು ಅವತಾರ್, ಎಂದಿರನ್, ಸ್ಪೈಡರ್ ಮ್ಯಾನ್ ನಂತಹ ಹೊಸ ಬಗೆಯ ಚಿತ್ರಗಳನ್ನು ನೋಡಬೇಕೆಂದರೆ ಹಿಂದಿ, ತೆಲುಗು, ತಮಿಳಲ್ಲಿ ನೋಡಬೇಕಾದ ಸ್ಥಿತಿ ಇದೆ ಇಂತಹ ಸಾಲಿನಲ್ಲಿ ಕನ್ನಡವೂ ಇದ್ದರೆ ವಿಶ್ವದ ಎಲ್ಲಾ ಚಿತ್ರಗಳನ್ನು ಸ್ವಂತ ಭಾಷೆಯಲ್ಲಿಯೇ ವೀಕ್ಷಿಸಬೇಕೆಂಬ ಆಸೆ ಇಟ್ಟುಕೊಂಡರೆ ಅದು ತಪ್ಪೆಂದು ಅನಿಸಲು ಕಾರಣವೇನು?
  • ಕನ್ನಡಿಗರು ಬೇರೆ ಭಾಷೆಯ ಚಿತ್ರಗಳನ್ನೇ ಹೆಚ್ಚು ನೋಡುತ್ತಾರೆ ಎಂದು ಗೊಣಗುತ್ತಿರುವ ನೀವು ಅವರಂತೆ ಏಕೆ ಚಿತ್ರಗಳನ್ನು ಮಾಡುವುದಿಲ್ಲ? 
  • ನಾವು ಬೇರೆ ಭಾಷೆಯ ಚಿತ್ರಗಳು ಚೆನ್ನಾಗಿರುತ್ತವೆ ಅನ್ನೋ ಕಾರಣದಿಂದ ನೋಡುತ್ತೇವೆ ಅಂತಹ ಪ್ರಯತ್ನ ನಿಮ್ಮಿಂದೇಕೆ ಆಗದು?
  • ಡಬ್ಬಿಂಗ್ ಒಪ್ಪಿಕೊಂಡಿರುವ ರಾಜ್ಯಗಳಲ್ಲಿ ಆ ಭಾಷೆಗೆ ನಷ್ಟ ಆದ ಉದಾಹರಣೆ ತೋರಿಸುವಿರಾ?


Tuesday, January 21, 2014ಹುಡುಗರೇ ದೇವದಾಸ್ ಆಗೋದು ಯಾಕೆ ?


      ಒಂದು ಕಾಲಕ್ಕೆ ದೇವದಾಸ ಅನ್ನೋ ಪದಕ್ಕೆ ಬಹಳಷ್ಟು ಬೆಲೆ ಇತ್ತು. ಈ ಹೆಸರು ಕೇಳಿದೊಡನೆ ಗೌರವ ಭಾವನೆ ಮೂಡುತ್ತಿತ್ತು. ರಾಮದಾಸ, ಪುರಂದರದಾಸ, ಗುರುದಾಸ ಇಂತಹ ಹೆಸರುಗಳು ಪಟ ಪಟನೆ ಸ್ಮತಿ ಪಟಲದಲ್ಲಿ ಹಾದು ಹೋಗುತ್ತಿದ್ದವು.
  ಇವಾಗ ಹಾಗಲ್ಲರಿ,,, ದೇವದಾಸ ಎಂದೊಡನೆ ಬಾರ್, ರಮ್ಮು ವಿಸ್ಕಿ ವೋಡ್ಕಾ ಮತ್ತೆ ವಿಶೇಷವಾಗಿ ಬ್ಲೇಡು ಕಾಣದ, ಕೆದರಿದ ಗಡ್ಡ ಕಣ್ಮುಂದೆ ಬರುತ್ತದೆ. ಇವರು ಸಹ ದಾಸರೆ, ವ್ಯತ್ಯಾಸ ಇಷ್ಟೆ ಅವರು ಮನೆ, ಹೆಂಡತಿ ಮಕ್ಕಳನ್ನು ಬಿಟ್ಟು ದಾಸರಾದರೆ ಇವರು ಹುಡುಗಿ ಕೈ ಕೊಟ್ಟದ್ದಕ್ಕಾಗಿ ದಾಸರಾಗಿದ್ದಾರೆ ಅವರು ದೇವರ ದಾಸರಾದರೆ ಇವರು ಸರಾಯಿಯ ದಾಸರಾಗಿರುತ್ತಾರೆ. ಅವರು ಯಾವುದೋ ಮಠವನ್ನು ಕಾವಲು ಮಾಡಿದರೆ ಇವರು ಬಾರ್ ಕಾಯುವುದನ್ನು ಮಾಡುತ್ತಾರೆ.

   ಪ್ರೀತಿಯೊಂದಿದ್ದರೆ ಜಗತ್ತನ್ನೇ ಗೆಲ್ಲಬಹುದೆಂದು ಅಂದು ಗಾಂಧಿ ಹೇಳಿದ್ದರು (ಶಾರುಖ್ ಖಾನ್ ಅನೇಕ ಸಿನೆಮಾಗಳಲ್ಲಿ ಸಾಬೀತು ಮಾಡಿದ್ದಾರೆ) ಪ್ರೀತಿ ಅನ್ನೋ ಒಂದೇ ಒಂದು ವಿಷಯವನ್ನಿಟ್ಟುಕೊಂಡು ವಿಶ್ವವಿಖ್ಯಾತರಾದವರನ್ನು ನೋಡಿದ್ದೇವೆ. ಪ್ರೀತಿಗಾಗಿ ಎಲ್ಲಾವನ್ನು ತ್ಯಾಗ ಮಾಡಿದವರನ್ನು ಸಹ ಕಂಡಿದ್ದೇವೆ ಇಂದು ಇದೇ ಪ್ರೀತಿಗಾಗಿ ನಮ್ಮ ಅನೇಕ ಯುವ ಮಿತ್ರರು ಹೀನಾಯ ಸ್ಥಿತಿಗೆ ತಲುಪಿರುವುದು ಖೇದಕರವಲ್ಲವೇ?

 ನಿಜವಾಗಲೂ ಇದಕ್ಕೆ ಪ್ರೀತಿನೇ ಕಾರಣನಾ?
   
    ಖಂಡಿತವಾಗಿಯೂ ಅಲ್ಲ. ಪ್ರೀತಿ ಕೆರಳಿದ ಜೀವನವನ್ನು ಹೂವಿನಂತೆ ಅರಳಿಸುತ್ತದೆ. ದುಷ್ಟ ವೈರಿಯನ್ನು ಇಷ್ಟದ ಸ್ನೇಹಿತನಾಗಿ ಮಾಡುತ್ತದೆ, ತುಳಿಯುವ ಕಲ್ಲನ್ನು ಬೆಳೆಯುವ ದೇವಾಲಯವನ್ನಾಗಿ ಮಾಡುತ್ತದೆ ಆದರೆ ಪ್ರತಿ ದೇವದಾಸರನ್ನು ಏಕಪ್ಪಾ ಹೀಗಾದೆ ಎಂದು ಕೇಳಿದರೆ ಇದಕ್ಕೆಲ್ಲ ಕಾರಣ ಪ್ರೀತಿ ಅಂತಲೇ ಹೇಳುತ್ತಾರೆ. ಆದರೆ ಎಡವಟ್ಟಾಗಿರೋದು ಎಲ್ಲಿ ಅಂತ ತಿಳಿದುಕೊಳ್ಳುವುದು ಅತಿ ಮುಖ್ಯ.
 ಹರೆಯದಲ್ಲಿ ಲೈಂಗಿಕ ಕಾಮನೆ ಮತ್ತು ದೈಹಿಕ ಆಕರ್ಷಣೆಗಳಿರುವುದು ಸಹಜ. ಅದೇ ಈ ಸಮಯದಲ್ಲಿ ಸಾಮಾನ್ಯವಾಗಿ ಸ್ನೇಹಿತೆ (ಲವರ್) ಹೊಂದಬೇಕೆಂಬ ಆಸೆ ಎಲ್ಲ ಹುಡುಗರಲ್ಲಿಯೂ ಇದ್ದೇ ಇರುತ್ತದೆ ಅದರಂತೆ ಹುಡುಕಾಟ ಆರಂಭಿಸುತ್ತಾರೆ. ಇಂದಿನ ಕಾಲದಲ್ಲಿ ಹುಡುಗಿಯರಿಗೇನು ಕೊರತೆಯಿಲ್ಲ ಆದರೆ ಒಳ್ಳೇ ಹುಡುಗಿ ಸಿಗಬೇಕಲ್ಲವೇ? ನಿಜವಾಗಲೂ ಎಡವಟ್ಟಾಗೋದು ಇಲ್ಲಿಯೆ.

  ಕಲರ್ ಕಲರ್ ಮ್ಯಾಚಿಂಗ್ ಡ್ರೆಸ್‍ಗಳನ್ನು ಧರಿಸಿ, ಮಾರ್ಕೆಟ್‍ನಲ್ಲಿ ಇದ್ದ ಎಲ್ಲಾ ಸೌಂದರ್ಯವರ್ಧಕಗಳನ್ನೂ(ಕಾಸ್ಮೆಟಿಕ್ಸ್) ಮುಖಕ್ಕೆ ಪೂಸಿಕೊಂಡು ಸುಂದರಾತಿ ಸುಂದರಳು ಎನ್ನುವಂತೆ ಫೋಸು ಕೊಡುವ ಹುಡುಗಿರನ್ನು ಕಂಡಾಗ ಇಂಥ ಹುಡುಗಿ ನನ್ನವಳಾಗಿದ್ದರೆ ಚೆನ್ನಾಗಿರುತ್ತದೆ ಎನ್ನುವ ಆಲೋಚನೆ ಎಲ್ಲರದ್ದು ಅದರಂತೆ ಅವಳು ಹೋದಲ್ಲೆಲ್ಲ ಅಲೆದು ಅವಳನ್ನು ಪಟಾಯಿಸಲು ವಿಧ ವಿಧದ ಸರ್ಕಸ್ ಮಾಡಲು ಆರಂಭಿಸುತ್ತಾರೆ ಇದನ್ನೇ ಕಾಯುವ ಅವಳು ಸುಮ್ಮನೆ ಬಿಡುತ್ತಾಳಾ? ಯಾವುದಾದರೂ ಕೆಲಸಕ್ಕೆ ಬರುತ್ತಾನೆ ಅಂದುಕೊಂಡು ಗೆಳೆತಿಯಂತೆ ನಟಿಸಲು ಆರಂಭಿಸುತ್ತಾಳೆ, ನೀನಿಲ್ಲದೆ ಜೀವನವೇ ಇಲ್ಲ ಅನ್ನೋ ತರ ಆಡುತ್ತಾಳೆ. ಒಂದು ದಿನ ಆ ಕಾಲ ಬಂದೇ ಬಿಡುತ್ತದೆ ಬಹಳ ದಿನಗಳಿಂದ ಚಾತಕ ಪಕ್ಷಿಯಂತೆ ನೀವು ಕಾಯುತ್ತಿರುವ love u to
ಅನ್ನೋ ಉತ್ತರ ಬಂತೆಂದರೆ ಸಾಕು ಇಹಲೋಕದ ಸುಂದರ ಸ್ವರ್ಗದಂತೆ ಕಾಣುವ ನಾಟಕೀಯ ಪ್ರೀತಿಯ ಬರಡು ಪ್ರಪಾತಕ್ಕೆ ಬಿದ್ದಂತೆಯೆ.
   ಮೊಬೈಲ್ ಕರೆನ್ಸಿ, ಸ್ಪೆಷಲ್ ಕಾಲ್‍ರೇಟ್ ಪ್ಯಾಕು, ಬರ್ಥಡೇ ಗಿಫ್ಟು ಅಂತ ಇದ್ದ ಎಲ್ಲವನ್ನು ಕಳೆದುಕೊಂಡ ಮೇಲೆ ಅಂತು ಇಂತು ಆ ಸುಂದರಿಯನ್ನು ಪಡೆದೆನಲ್ಲ ಅನ್ನೋ ಖುಷಿಯಲ್ಲಿ ಅಪ್ಪನು ತಂದಿಟ್ಟಿದ್ದ ಮೆತ್ತನೆ ಸೋಫಾದ ಮೇಲೆ ಒರಗಿಕೊಂಡು ಯಾವ ಸೀನಿಮಾಗು ಕಮ್ಮಿಯಿಲ್ಲ ಅನ್ನುವಂತೆ ಮುಂದಿನ ಜೀವನ ಅವಳ ಜೊತೆ ಹೇಗಿರಬೇಕೆಂಬ ಸುಂದರ ಕನಸನ್ನು ಕಾಣುತ್ತಿರುವಾಗ ಎಲ್ಲಿಂದಲೋ ಫೋನು ರಿಂಗಣಿಸುವ ಶಬ್ದವಾದಂತಾಗಿ ಎಚ್ಚರಗೊಂಡು ಕಣ್ಣುಗಳನ್ನು ವರೆಸಿಕೊಳ್ಳುತ್ತಾ ಓ ನಂದೆ ಅರೆ! ಅವಳೆ! ಅವಳಿಗೆ ಸಾವೆ ಇಲ್ಲ ನೂರು ಕಾಲ ಬದುಕುತ್ತಾಳೆ ಎಂದು ಯಾವಾಗಲೋ ಹೇಳಿದ ಅಜ್ಜನ ಮಾತುಗಳ ನೆನಪು ಬೇರೆ ಹಾಗೆಯೆ ಮೆತ್ತಗೆ ರಿಸೀವ್ ಬಟನ್ ಅದುಮಿ ಫೋನ್ ಕಿವಿಗೆ ತಾಗಿಸಿದಾಗ ಅಹಾ! ಅದೇ ಸುಮಧುರ ಕಂಠದಿಂದ "sorry ಇನ್ಮುಂದೆ ಭೇಟಿಯಾಗಕ್ಕಾಗಲ್ಲ, ನಮ್ಮ ಡ್ಯಾಡಿ ಎಂಗೇಜ್‍ಮೆಂಟ್ ಫಿಕ್ಸ್ ಮಾಡಿದ್ದಾರೆ ಪ್ಲೀಸ್ ಇನ್ಮುಂದೆ ಕಾಲ್ ಮಾಡಲು ಪ್ರಯತ್ನಿಸಬೇಡ” ಅನ್ನೋ ಮಾತು ಕೇಳಿದೊಡನೆ ಅಘಾತವಾದಂತಾಗಿ ಎನ್...ಎನ್...ಎನ್..! ಅನ್ನುವಷ್ಟರಲ್ಲಿಯೇ ಕಾಲ್ ಕಟ್ ಆಗಿರುತ್ತೆ ಮುಂದೆ ಏನಾಗುತ್ತೆ ಅನ್ನೋದು ಅಂದಾಜಿಸಬಹುದು ನೀವಂದುಕೊಂಡಂತೆ ಕಣ್ಣಿಗೆ ಬಿದ್ದ ಹುಡುಗಿಯರನ್ನೆಲ್ಲಾ ದ್ವೇಷಿಸುತ್ತಾ, ಅದೇ ಕಿತ್ತೋಗಿರೋ ಹಳೆ ಹ್ಯಾಂಡ್ ಸೆಟ್‍ನಲ್ಲಿ love ಫೀಲಿಂಗ್ ಸಾಂಗ್ ಕೇಳುತ್ತಾ ಆಗಿಯೇ ಬಿಟ್ಟ ದೇವದಾಸ.

 ಈ ವಯಸ್ಸಲಿ ಯುವಕರು ತನ್ನ ಭವಿಷ್ಯ ರೂಪಿಸಿಕೊಳ್ಳೊದಲ್ಲದೇ ದೇಶದ ಭವಿಷ್ಯದ ಕನಸ್ಸನ್ನು ಕಾಣುವ ಬದಲು ಯಾವುದೋ ಆಕರ್ಷಣೆಗೆ ಒಳಗಾಗಿ ಸಂಗಾತಿ ಹುಡುಕುವ ಆತುರದಲ್ಲಿ ತೆಗೆದುಕೊಂಡ ತಪ್ಪು ನಿರ್ಣಯದಿಂದ ಮನೆಯವರಿಂದ, ಸಮಾಜದಿಂದ ತಿರಸ್ಕøತರಾಗಿ ಅವರ ಇಡೀ ಜೀವನವೇ ನರಕವನ್ನಾಗಿ ಮಾಡಿಕೊಳ್ಳುತ್ತಾರೆ.
  ಹಾಗಂತ ಎಲ್ಲಾ ಹುಡುಗಿಯರು ಕೆಟ್ಟವರು ಎಂದು ಹೇಳೋಕಾಗಲ್ಲ. ಕೆಲ ಹುಡುಗಿಯರ ಅಪಕೃತ್ಯದಿಂದ ಪ್ರೀತಿ ಅನ್ನೋ ಹೆಸರಿನ ಜೊತೆಗೆ ಎಲ್ಲಾ ಹುಡುಗಿಯರ ಮೇಲೆ ಕಳಂಕ ಬರುತ್ತಿದೆ.
  
 ‘ದೇವದಾಸ’ ದಿಂದ ಮುಕ್ತಿ ಸಾಧ್ಯನಾ ?
  
   ಇಂತಹ ದೇವದಾಸರನ್ನು ಕಂಡ ಗೆಳೆಯರು ಪ್ರೀತಿ ಎಂಬ ಪದ ಕೇಳಿದೊಡನೆ ಬೇಡಪ್ಪೋ ಬೇಡ ಅನ್ನೋ ಮಿತ್ರರು ಎಲ್ಲಾ ಹುಡುಗಿಯರನ್ನು ದ್ವೇಷಿಸಲು ಆರಂಭಿಸುತ್ತಾರೆ. ಆದರೆ ಪ್ರೀತಿಸದೇ ಇರೋಕ್ಕಾಗಲ್ಲ ಪ್ರತಿಯೊಬ್ಬರ ಜೀವನಕ್ಕೆ ಪ್ರೇಮ ಅತ್ಯಗತ್ಯ ಅದಕ್ಕೆ ಪರಿಹಾರ ವಿಲ್ಲವೇ ಅನ್ನೋ ಪ್ರಶ್ನೆ ಮೂಡುತ್ತದೆ ಹಾಗಾದರೆ ಇಲ್ಲಿ ಕೆಳಿ,

  ದುಡುಕೇ ಕೆಡುಕಿನ ಮೂಲ ಎನ್ನುವಂತೆ ಯಾವತ್ತು ದುಡಕದಿರಿ, ಲೇಟ್ ಆದರೂ ಚಿಂತೆಯಿಲ್ಲ ಲೇಟೆಸ್ಟ್ ಆಗಿರೋ, ಮನಸ್ಸಿನಿಂದ ಸುಂದರವಾಗಿರೋ ಗೆಳತಿಯನ್ನು ಆರಿಸಿಕೊಳ್ಳಿರಿ. if choice is right future will be bright.

Tuesday, December 17, 2013

Published in samyukta karnataka. Youngturk 26-12-1013 with Titleof avalannu hudukutta

          ಚೆಲುವೆ! ನಿನ್ನ ಹುಡುಕಾಟದಲ್ಲಿ,,,


ಚುಮು ಚುಮು ಚಳಿಯಲ್ಲಿ ಮುಂಜಾನೆ ಸಮಯ ಕಳೆದಷ್ಟು ಹೊದ್ದ ಹೊದಿಕೆ ಇನ್ನಷ್ಟು ಆಪ್ತವಾಗುತ್ತದೆ. ಹಾಗೆಯೆ ಮಲಗಲು ನಿದ್ದೆ ಬರಲೇಬೇಕು ಅಂತೇನಿಲ್ಲ. ಎಕ್ಸಾಂಗಳೆಲ್ಲ ಮುಗಿದು ಚಿಂತಾಮುಕ್ತನಾಗಿಯೇ ಮನೆಗೆ ಬಂದ ನಾನು ಯಾರ ಗೊಡವೇ ನನಗೇಕೆ ಎಂಬಂತೆ ಮುಸುಕು ಹಾಕಿದ್ದೆ. ನಾನು ಮಲಗಿದ್ದೇನೆಂದು ರವಿ ಮಲಗುತ್ತಾನೆಯೇ? 
     ಎಂದಿನಂತೆ ತನ್ನ ಪಾಡಿಗೆ ತಾನು ಮೇಲಕ್ಕೆ ಮೇಲಕ್ಕೆ ಏರುತ್ತಲೇ ಇದ್ದ. ಈ ಕಡೆ ನನ್ನ ಎಬ್ಬಿಸಲು ಅಮ್ಮನ ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದ್ದವು. ಚಾಣಕ್ಯ ಪ್ರತಿಜ್ಞೆ ಮಾಡಿದಳೇನೋ ಎಂಬಂತೆ ಅಮ್ಮನ ದ್ವನಿಯೂ ಏರುಗತಿಗೆ ತಿರುಗುತ್ತಿತ್ತು. ಯಾವುದಕ್ಕೂ ಜಗ್ಗದಿದ್ದಾಗ ಒಂದು ಉಪಾಯ ಮಾಡಿ “ಚಾಯ್ ಖಾಲಿಯಾಗುತ್ತಿದೆ ಇನ್ನು ತಡವಾದರೆ ಸಿಗಲ್ಲ” ಎನ್ನುವ ಅಮ್ಮನ ಮಾತು  ಮುಗಿಯುವಷ್ಟರಲ್ಲಿಯೇ ಏನ್ ಕಳೆದೊಯಿತು ಎನ್ನುವಂತೆ ಎದ್ದು ಹಳಸು ಮುಖದಲ್ಲೇ ಮುಂದೆ ಹೋಗಿ ನಿಂತುಕೊಂಡೆ. ಅಮ್ಮನಿಗೆ ನನ್ನ ವೀಕ್‍ನೆಸ್ ಟೀ ಅಂತ ಚೆನ್ನಾಗಿ ಗೊತ್ತಿತ್ತು. ನೀನ್ ಮಾತ್ರ ಸರಿ ದಾರಿಗೆ ಬರಲ್ಲ ಎನ್ನುವ ಗೋಳು ಕೇಳುತ್ತಲೇ ರುಚಿ ರುಚಿಯಾದ ಚಾಯ್ ಹೀರಿ ಗ್ಲಾಸ್ ಖಾಲಿ ಮಾಡಿಬಿಟ್ಟೆ.
  
  ದಿನಚರಿಗಳೆಲ್ಲ ಮುಗಿಸಿದ ನಾನು ನನಗಾಗಿಯೇ ಕಾಯುತ್ತಿದ್ದ ಸೂರ್ಯನ ಕಿರಣಗಳಿಗೆ ಮೈಯೊಡ್ಡಿ ‘ಡಿ’ ವಿಟಮಿನ್ ಹೀರುತ್ತಾ ಈವತ್ತೇನು ಮಾಡುವುದೆಂದು ಯೋಚಿಸುತ್ತಿರುವಾಗಲೆ ಕಣ್ಮುಂದೆ ಏನೋ ಹಾದು ಹೋದಂತಾಯಿತು. ಏನೆಂದು ಯೋಚಿಸುತ್ತಿರುವಾಗಲೇ “ರೇಖಾ ಬೇಗ ಬಾ” ಎನ್ನುವ ಪಕ್ಕದ್ಮನೆ ಅಂಟಿಯ ದ್ವನಿ ಕೇಳಿಸಿತ್ತು ಆ ದ್ವನಿಯ ಗುರಿ ಎಲ್ಲಿದೆಯೆಂದು ಹಿಂದಕ್ಕೆ ತಿರುಗಿ ನೋಡಿದಾಗ ಕಂಡವಳೇ ಆ ಚಲುವೆ. ಸೌಂದರ್ಯ ಏನು ಅಂತ ನನಗೆ ಗೊತ್ತಾಗಿದ್ದೇ ಆವತ್ತು. ಎಲ್ಲವನ್ನು ಮರೆತುಬಿಟ್ಟೆ. ಕಾಲುಗಳು ತನ್ನಷ್ಟಕ್ಕೆ ತಾನು ಅವಳೆಡೆಗೆ ಚಲಿಸಲಾರಂಭಿಸಿದವು. ಮುಂಜಾನೆ ಎಷ್ಟೇ ಪ್ರಯತ್ನಪಟ್ಟರೂ ತೆರೆಯಲೊಲ್ಲೆ ಎನ್ನುವ ಕಣ್ಣ ರೆಪ್ಪೆಗಳು ತಮ್ಮ ಕೆಲಸವನ್ನೇ ಮರೆತಂತೆ ಸ್ಥಬ್ದವಾಗಿ ನಿಂತು ಬಿಟ್ಟವು. ನನಗರಿವಿಲ್ಲದೆ ಮನೆ ಪಕ್ಕದ ರೋಡಿನ ಮೇಲೆ ಬಂದು ಬಿಟ್ಟೆ. ನೋಡ ನೋಡುತ್ತಲೇ ಸನಿಹದಿಂದ ಹಾದು ಹೋದಳು. ಅವಳಿಂದ ಸುಳಿದು ಬಂದ ಗಾಳಿ ನನ್ನನ್ನು ಸ್ಪರ್ಶಿಸಿ ಮೈಯೆಲ್ಲಾ ರೋಮಾಂಚನ ಉಂಟು ಮಾಡಿತ್ತು. ಆಮೇಲೆ ಅವಳು ನನ್ನಂತೆ ರಜೆ ಕಳೆಯಲು ಪಕ್ಕದ ಮನೆ ಶಾರದಾ ಆಂಟಿಯ  ಮನೆಗೆ ಬಂದಿದ್ದಾಳೆಂದು ತಿಳಿಯಿತು.

    ಅಂದಿನಿಂದ ನನ್ನ ದಿನಚರಿಯೇ ಬದಲಾಯಿತು. ಬೆಳಿಗ್ಗೆ ಬೇಗ ಏಳುವುದು ಒಂದು ದೊಡ್ಡ ಸಾಧನೆ ಎಂಬಂತೆ ಮಾಡುತ್ತಿದ್ದ ನಾನು ಎಲ್ಲರಿಗಿಂತ ಮೊದಲು (ಸೂರ್ಯನಿಗಿಂತ) ಏಳಲು ಆರಂಭಿಸಿದೆ. ಅಮ್ಮನಿಗೆ ಒಂಥರ ಖುಷಿ ಎನಿಸಿದರೂ ಒಳಗೊಳಗೆ ಏನೋ ಇದೆ ಎಂದು ಶಂಕಿಸತೊಡಗಿದಳು. ದಿನಾಲು ಬೆಳಿಗ್ಗೆ ಅವಳ ಮುಖ ನೋಡಿದರೆನೇ ಆನಂದ. ಆ ಇಂಪು ದ್ವನಿ ಕೇಳಲು ಕಿವಿಗಳು ಯಾವಾಗಲು ಕಾತರಿಸುತ್ತಿದ್ದವು. ದಿನಾ ಅವಳನ್ನು ನೋಡುವುದೇ ನನ್ನ ಕಾಯಕವಾಯಿತು. ಒಂದೊಂದು ಸಲ ಅವಳೂ ನನ್ನೆಡೆಗೆ ಕಣ್ಣು ಹಾಯಿಸಿದಾಗ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾಳೆಂದು ಅನಿಸುತ್ತಿತ್ತು. ಅವಳ ಸೌಂದರ್ಯಕ್ಕೆ ಮೊದಲ ನೋಟದಲ್ಲೇ ಸೋತುಹೋಗಿದ್ದ ನಾನು ಒಂದು ದಿನ ಮನಸಲ್ಲಿನ ಭಾವನೆ ಹೇಳಿಯೇ ಬಿಡೋಣವೆಂದು ಧೃಢ ನಿರ್ಧಾರ ಮಾಡಿ, ಅಂಜಿಕೆ ಅಳುಕುಗಳನ್ನೆಲ್ಲಾ ತೆಗೆದು  ಹಾಕಿ ಆಂಟಿ ಮನೆ ಮುಂದೆ ಹೋಗಿ ನಿಂತಾಗ ದೊಡ್ಡ ಅಘಾತವೇ ಕಾದಿತ್ತು. ಆಕಾಶವೇ ಮೇಲೆ ಕಳಚಿ ಬಿತ್ತೇನೋ ಅನ್ನುವಂತೆ ಭಾಸವಾಯಿತು.
  
ಏಕೆಂದು ಕೇಳುತ್ತೀರಾ?
    
   ಕೈಯಲ್ಲಿ ಬ್ಯಾಗ್ ಹಿಡಿದು ಮನೆಯವರಿಗೆ ಟಾಟಾ, ಬೈ, ಟೇಕ್ ಕೇರ್ ಎನ್ನುತ್ತಿದ್ದಂತೆ ಅವರು ನುಸುನಗುತ್ತಾ ಕೈ ಮೇಲೆತ್ತಿ ಅಲುಗಾಡಿಸಿ ಬೈ, ಬೈ ರೇಖಾ ಚನ್ನಾಗಿ ಓದಿಕೊ ಎನ್ನುತ್ತಿದ್ದರು ಅವಳಿಂದ ಹೊರಡುವ ಟಾ-ಟಾ, ಬೈ-ಬೈ ಎನ್ನುವ ಶಬ್ದಗಳು ನನ್ನೆದೆಯಿಂದ ಈಟಿಯಂತೆ ಹಾದುಹೋಗುತ್ತಿದ್ದವು ನಾನಾಗ ಅಸಹಾಯಕ. ಯಾರಗೊಡವೆಗೆ ಹೊಗದೆ ಮನೆಯವರನ್ನು ರೇಗಿಸುತ್ತಾ  ಆನಂದದಿಂದ ಇದ್ದ ನನಗೆ  ನಾಲ್ಕು ದಿನಗಳು ಸ್ವರ್ಗದಂತೇನೊ ಎನಿಸಿದವು ನಂತರದ ಗೋಳು ನಡುಬಿಸಿಲಲ್ಲಿ ಕೆಂಪು ಚೇಳು ಕಡಿದಾಗ ಆಗುವಂತ ಯಾತನೆ. ಮಿಂಚಿನಂತೆ ಬಂದವಳು ಅದರಂತೆಯೇ ಬೇಗ ಮಾಯವಾದಳು. ಈಗ  ಆ ದಿನಗಳನ್ನು ಮರೆತ್ತಿದ್ದೇನೆ ಆದರೆ ಎಲ್ಲಿ ಹೋದರೂ ಅವಳೇ ಕಣ್ಮುಂದೆ ಬಂದಂತಾಗುತ್ತದೆ ಎಲ್ಲೋ ಒಂದು ಕಡೆ ಆ ಮಿಂಚು ಮತ್ತೆ ಕಣ್ಣಿಗೆ ಗೋಚರಿಸುವುದೇನೋ ಅನ್ನೋ ಸಣ್ಣ ಆಶಾಕಿರಣ ಸುಳಿದಾಡುತ್ತಿದೆ.

 ನಿಮ್ ಕಣ್ಣಿಗೆ ಬಿದ್ದರೆ ತಿಳಿಸುವಿರಾ.....?

Sunday, December 15, 2013

Published in vijaykarnataka lavalavike 3rd march 2014

ಪ್ರೇಮ ಪ್ರಪಾತಕ್ಕೆ ಸಿಲುಕುವ ಮುನ್ನ...!


            ಅದು ಸುಂದರ ಕನಸುಗಳಲ್ಲಿ ತೇಲಾಡುತ್ತಾ ಭವಿಷ್ಯ ಹೇಗಿರಬೇಕೆಂದು ದೊಡ್ಡವರನ್ನು ಅನುಸರಿಸಿ ಎಲ್ಲದ್ದಕ್ಕಿಂತ ಭಿನ್ನವಾಗಿ ಜೀವನ ರೂಪಿಸಿಕೊಳ್ಳುವ ಕನಸುಗಳಿಗೆ ಇಂಬು ನೀಡುತ್ತಾ ಇರುವ ವಯಸ್ಸು. ಇನ್ನು ಚಿಗುರು ಮೀಸೆ ಮೂಡಿಲ್ಲ ಇಷ್ಟಪಟ್ಟದನ್ನೆಲ್ಲಾ ತಂದುಕೊಡುವಲ್ಲಿ ಡ್ಯಾಡ್ ಎಂದು ಹಿಂದು ಮುಂದು ನೋಡಿಲ್ಲ. ಮಮ್ಮಿಯ ಬೈಗುಳಗೇನು ಕೊರತೆಯಿಲ್ಲ. ಅವ್ಯಾವು ಕಿವಿಗೆ ಬಿದ್ದರೂ ಗಾಳಿಗೆ ತೂರಿಕೊಂಡು ಹೋಗುತ್ತವೆ. ದಿನಾಲು ಫೊನ್ , ಫೇಸ್‍ಬುಕ್  ಚಾಟಿಂಗ್ ನಲ್ಲಿ ಮುಳುಗಿದ್ದು ಯಾರ ಅರಿವಿಗೇ ಬಂದಿಲ್ಲ. 

  ಅಷ್ಟರಲ್ಲೇ ಸುಂದರ ಕಂಗಳ ಪಟಪಟಾಂತ ಮಾತಾಡುವ, ಐಶ್ವರ್ಯಳಿಗೆ ಹಿಂದಿಕ್ಕುವಂತಹ ಬ್ಯುಟಿಫುಲ್ ಗೆಳತಿಯ ಪರಿಚಯ. ಇಂದಿನ ಹುಡುಗರ ಸ್ಪೀಡಿನ ರೇಂಜಿಗೆ ಪರಿಚಯ ಗಾಢ ಸ್ನೇಹವಾಗಲು ಸಮಯ ಹಿಡಿಯುವುದಿಲ್ಲ. ಸ್ವಲ್ಪ ದಿನಗಳಲ್ಲಿಯೇ ಪ್ರೇಮಕ್ಕೆ ತಿರುಗಿ ಫೀಲ್ಮು, ಗಾರ್ಡನ್ನು, ಪಾಪ್‍ಕಾರ್ನ್ ಸೆಂಟರ್ ಗಳಲ್ಲಿ ಅಲೆದಾಟ. ಮನೆಯಲ್ಲಿ ಸಾಲು ಸಾಲು ಸುಳ್ಳುಗಳ ಸರಮಾಲೆ ಹೆಣೆದು ಪ್ರೇಮಿಗಳ ಮಿಲನ. ಇಲ್ಲಿ ಯಾರ ಉಪದೇಶವು ತಲೆಗೆ ಹತ್ತದು, ತಮ್ಮದೇ ಲೋಕದಲ್ಲಿ ವಿಹಾರ  ನಡೆಸುತ್ತಾರೆ. ಚಿತ್ರ ವಿಚಿತ್ರವಾದ ನಡವಳಿಕೆ, ‘ಯಾರೊಂದಿಗೂ ಕಣ್ಣಲ್ಲಿ ಕಣ್ಣೀಟ್ಟು ಮಾತನಾಡುವುದೇ ಇಲ್ಲ, ಏನ್ ಮ್ಕಕಳೋ ಏನೋ”  ಎಂದು ಮೂಲೆಯಲ್ಲಿ ಕುಳಿತ ಅಜ್ಜಿಯ ಗುನುಗಾಟ ಯಾರ ಕಿವಿಗು ನಾಟುವುದೇ ಇಲ್ಲ. ಮುಂದೊಂದು ದಿನ...

  ಹೌದು, ನೀವಂದುಕೊಂಡಂತೆ ನವಪ್ರೇಮಿಗಳ ಪಲಾಯನ. ಇತ್ತ ತಂದೆ ತಾಯಿಯ ಹುಚ್ಚುಚ್ಚು ಅಲೆದಾಟ, ಕಂಡ ಕಂಡವರನ್ನು ನನ್ನ ಕೂಸಿನ (ಹೌದು ಎಷ್ಟು ದೊಡ್ಡವರೆಂದುಕೊಂಡರೂ ತಂದೆ ತಾಯಿಗೆ ಕೂಸೆ) ವಿಚಾರಣೆ, ಏನು ಮಾಡಲಾಗದೇ, ಉಪಾಯ  ತೋಚದೆ ವಿಚಿತ್ರ ಆಪತ್ತಿನಿಂದ ಹೊರಬರದೇ ಒದ್ದಾಡುವಿಕೆ. 

 ಮತ್ತೆ ಮನೆ ನೆನಪಿಗೆ ಬರುವುದು ಇದ್ದೆಲ್ಲಾ ದುಡ್ಡು ಖಾಲಿ ಆದಮೇಲೆನೆ. ಕಾಂಚನ  ಇರೋವರೆಗೂ ಮಜಾ ಮಾಡಿ ಇದ್ದೆಲ್ಲವನ್ನು ಕಳೆದು ಮತ್ತೆ ತಿರುಗಿ ಮನೆಯೇ ಗತಿ. ಓದು ಇಲ್ಲದೆ ಅತ್ತ ಜೀವನ ಇಲ್ಲದೆ ‘ಧೋಭಿಕಾ ಕುತ್ತಾ ನಾ ಘರ್‍ಕಾ ನಾ ಘಾಟ್‍ಕಾ’(ಅಗಸನ ನಾಯಿಯ ಪಾಡು ಮನೆಗೂ ದಕ್ಕಲ್ಲ ಕಾಡಿಗೂ ದಕ್ಕಲ್ಲ) ಅನ್ನುವಂತಾಗುತ್ತದೆ. ಇಂತಹ ಘಟನೆಗಳು ಸಿಕ್ಕಾಪಟ್ಟೆ ಕಾಣುತೇವೆ. 

ಇದಕ್ಕೆ ಪರಿಹಾರವಿಲ್ಲವೇ? 
* ಎಲ್ಲದಕ್ಕೂ ಒಂದು ಕಾಲ ಅಂತ ಇದೆ. ಆತುರಕ್ಕೆ ಬೀಳದೆ ಯಾವ ವಯಸ್ಸಿನಲ್ಲಿ  ಏನು ಮಾಡಬೇಕು ಎನ್ನುವುದನ್ನು ಮನದಟ್ಟು ಮಾಡಿಕೊಳ್ಳಿ. 
* ಈ ವಯಸ್ಸಿನಲ್ಲಿ ಆಕರ್ಷಣೆ ಸಹಜ ಆದರೆ ತನ್ನ ಗುರಿ ತಲುಪಿದ ಮೇಲೆಯೇ ಪ್ರೀತಿ, ಪ್ರೇಮ ಮದುವೆ ವಿಚಾರ ಅಳವಡಿಸಿಕೊಳ್ಳಿ. 
*ಉತ್ತಮ ವ್ಯಕ್ತಿಗಳ ಜೀವನ ತಿಳಿದುಕೊಳ್ಳಿ ಅವರಂತೆ ದೊಡ್ಡ ಗುರಿಯನ್ನಿಟ್ಟುಕೊಳ್ಳಿ. 
* ಚಲನ ಚಿತ್ರಗಳ ಪ್ರಭಾವಕ್ಕೆ ಒಳಗಾಗದಿರಿ ಏಕೆಂದರೆ ರೀಲ್ ಲೈಫಿಗಿಂತ  ರಿಯಲ್ ಲೈಫು  ತುಂಬಾ ಭಿನ್ನ.
        
      ಮಕ್ಕಳ ಜೀವನ ರೂಪಿಸುವುದರಲ್ಲಿ ಪಾಲಕರ ಪಾತ್ರ ದೊಡ್ಡದು ಇದರಿಂದ ನಿಮ್ಮಲ್ಲೂ ಒಂದು ಸಣ್ಣ ಮನವಿ,
          ಪ್ಲೀಸ್.....,  ಪುತ್ರ/ಪುತ್ರಿಯ ಚಲನವಲನದ ಮೇಲೆ ಒಂದು ಕಣ್ಣಿಡಿ.